ತುರುವೇಕೆರೆ : ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆದೇಶದಂತೆ ಹಾಗೂ ಸಂಪುಟ ಸಭೆಯ ನಿರ್ಣಯದಂತೆ ತುರುವೇಕೆರೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಮತ್ತು ನೋಂದಾಯಿಸಲು ಆಸಕ್ತ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಯುವ ಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರಾಸರಿ ನಾಲ್ಕು ಸಾವಿರ ಜನಸಂಖ್ಯೆಗೆ ಒಂದರಂತೆ ಯುವ ಸಂಘಗಳನ್ನು ಸ್ಥಾಪಿಸಲು ಆದೇಶಿಸಲಾಗಿದ್ದು, ತುರುವೇಕೆರೆಯಲ್ಲಿ ಈ ಪ್ರಕ್ರಿಯೆ ಆರಂಭಿಸಲಾಗಿದೆ.
16 ವರ್ಷದಿಂದ 35 ವರ್ಷದೊಳಗಿನ ವಯೋಮಿತಿಯ ಸ್ಥಳೀಯ ನಿವಾಸಿಗಳು ಈ ಸಂಘದ ಸದಸ್ಯರಾಗಲು ಅರ್ಹರಿರುತ್ತಾರೆ. ಪ್ರತಿ ಘಟಕದಲ್ಲಿ ಕನಿಷ್ಠ 100 ಸದಸ್ಯರಿರಬೇಕಿದ್ದು, ಬಿಜಿವೈಎಸ್ ಪೋರ್ಟಲ್ ಅಥವಾ ಮೊಬೈಲ್ ಆಪ್ ಮೂಲಕ ಅಥವಾ ಸ್ಥಳೀಯ ಕರ್ನಾಟಕ ಒನ್ ಹಾಗೂ ನಾಗರೀಕ ಸೇವಾ ಕೇಂದ್ರ (ಗ್ರಾಮ ಒನ್) ಗಳ ಸಹಾಯದಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ನೋಂದಣೀಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಪ್ರತಿ ಸದಸ್ಯರಿಗೆ ತಲಾ 10ರೂ ನೋಂದಣಿ ಶುಲ್ಕ ನಿಗದಿಯಾಗಿದೆ. ಸಂಘಗಳನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ನೋಂದಾಯಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್


