ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚು ಯುವಜನತೆಯನ್ನು ಮಾತ್ರವಲ್ಲ ಹಿರಿಯರನ್ನೂ ಬಿಡುತ್ತಿಲ್ಲ. ಕೈಯಲ್ಲಿ ಮೊಬೈಲ್ ಸಿಕ್ಕರೆ ಸಾಕು ರೀಲ್ಸ್ ಮಾಡಿ ವಿಡಿಯೋ ಅಪ್ ಲೋಡ್ ಮಾಡುವುದರಲ್ಲಿ ಕಾಲ ಕಳೆಯುತ್ತಾರೆ. ಇಲ್ಲವೇ ಮೊಬೈಲ್ ನಲ್ಲಿ ರೀಲ್ಸ್ ನೋ ಡುವುದರಲ್ಲಿಯೇ ಮುಳುಗಿರುತ್ತಾರೆ.
ಇದೇ ರೀತಿ ಮೊಬೈಲ್ ನಲ್ಲಿ ಪತ್ನಿ ರೀಲ್ಸ್ ನೋಡುತ್ತಾ ಕುಳಿತಿದ್ದಕ್ಕೆ ಕೋಪಗೊಂಡ ಪತಿ ಮಹಾಶಯ ಆಕೆಯನ್ನು ಹೊಡೆದು ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೆಚ್‌ಎಎಲ್ ನ ವಿಭೂತಿಪುರದಲ್ಲಿ ಈ ಘಟನೆ ನಡೆದಿದೆ. ರೀಲ್ಸ್ ನೋಡುತ್ತಿದ್ದ ಪತ್ನಿಯನ್ನು ಕೊಲೆಗೈದ ಪತಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಘವೇಂದ್ರ ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಶೃತಿ ಪತಿಯಿಂದಲೇ ಕೊಲೆಯಾದ ಪತ್ನಿ.
ರಾಘವೇಂದ್ರ ಹಾಗೂ ಶೃತಿ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳನ್ನು ದಾವಣಗೆರೆಯಲ್ಲಿರುವ ಅಜ್ಜಿ ಮನೆಯಲ್ಲಿ ಇರಿಸಲಾಗಿತ್ತು. ದಂಪತಿ ಇಬ್ಬರೇ ಮನೆಯಲ್ಲಿ ಇದ್ದರು. ಪತ್ನಿ ಯಾವಾಗಲೂ ರೀಲ್ಸ್ ನೋಡುತ್ತಿರುವ ಕಾರಣಕ್ಕೆ ಪತಿ ಜಗಳವಾಡಿದ್ದಾನೆ.
ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿದೆ. ಪತಿ ರಾಘವೇಂದ್ರ ಬಿಯರ್ ಬಾಟಲ್‌ನಿಂದ ಪತ್ನಿಯ ತಲೆಗೆ ಹೊಡೆದಿದ್ದಾನೆ. ಗಂಭಿರವಾಗಿ ಹಲ್ಲೆಗೊಳಗಾದ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪತ್ನಿ ಸಾವನ್ನಪ್ಪುತ್ತಿದ್ದಂತೆ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೋಷಕರ ದುಡುಕಿನ ನಿರ್ಧಾರಕ್ಕೆ ಮಕ್ಕಳಿಬ್ಬರು ಅನಾಥರಾಗಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್‌ಎಎಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


