ತುಮಕೂರು: ಮನೆಯಲ್ಲಿ ನಡೆದ ತೀರಾ ಕ್ಷುಲ್ಲಕ ವಿಚಾರದ ಜಗಳವೊಂದು ಬಾಲಕಿಯೊಬ್ಬಲು ಆತ್ಮಹತ್ಯೆ ಮಾಡಿಕೊಂಡ ದುಃಖದ ಘಟನೆ ತುಮಕೂರು ನಗರದ ಜಯನಗರದಲ್ಲಿ ನಡೆದಿದೆ.
ಸಾಂಬಾರು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಕ ಮತ್ತು ತಂಗಿಯ ನಡುವೆ ಉಂಟಾದ ಸಣ್ಣ ಗಲಾಟೆಯಿಂದ ಮನನೊಂದ 16 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ಮನೆ ಬಳಿಯಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ.
ಮೃತ ದುರ್ದೈವಿ ಬಾಲಕಿಯನ್ನು ಹುಲಿಗಮ್ಮ (16) ಎಂದು ಗುರುತಿಸಲಾಗಿದೆ. ಈಕೆಯ ಕುಟುಂಬ ಮೂಲತಃ ರಾಯಚೂರು ಜಿಲ್ಲೆಯಾಗಿದ್ದು, ಪ್ರಸ್ತುತ ಜೀವನೋಪಾಯಕ್ಕಾಗಿ ತುಮಕೂರು ನಗರದ ಜಯನಗರ 5ನೇ ಕ್ರಾಸ್‌ನಲ್ಲಿ ವಾಸವಾಗಿತ್ತು.
ಮೃತಳ ತಂದೆ ದೇವರಾಜು ಅವರು ಗೂಡ್ಸ್ ಆಟೋ ಓಡಿಸುತ್ತಾ ಕುಟುಂಬವನ್ನು ನಿರ್ವಹಿಸುತ್ತಿದ್ದರು. ದೇವರಾಜು ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಹುಲಿಗಮ್ಮ ಎರಡನೇ ಮಗಳಾಗಿದ್ದಳು. ಈಕೆ ನಗರದ ಉಮಾ ಪ್ರಗತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಶನಿವಾರ ಮಧ್ಯಾಹ್ನ ಮನೆಯಲ್ಲಿ ಅಡುಗೆಗೆ ಸಾಂಬಾರು ಮಾಡುವ ವಿಷಯವಾಗಿ ಹುಲಿಗಮ್ಮ ಹಾಗೂ ಆಕೆಯ ಅಕ್ಕನ ನಡುವೆ ಸಣ್ಣ ಮಟ್ಟದ ಮಾತಿನ ಚಕಮಕಿ ಆರಂಭವಾಗಿದೆ.
ಈ ಗಲಾಟೆಯಿಂದ ತೀವ್ರ ಬೇಸರ ಹಾಗೂ ಮನಸ್ಸಿಗೆ ಆಘಾತ ಮಾಡಿಕೊಂಡ ಹುಲಿಗಮ್ಮ, ಮನೆ ಸಮೀಪದಲ್ಲಿದ್ದ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಜೀವ ತೊರೆದಿದ್ದಾಳೆ.


