ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ (Sexual Assault) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಐದು ವರ್ಷಗಳಲ್ಲಿ 15,000ಕ್ಕೂ ಅಧಿಕ ಪೋಕ್ಸೊ (POCSO) ಪ್ರಕರಣಗಳು ದಾಖಲಾಗಿವೆ. ಸರಾಸರಿ ದಿನಕ್ಕೆ 7 ರಿಂದ 8 ದೂರುಗಳು ಸಲ್ಲಿಕೆಯಾಗುತ್ತಿರುವುದು (Child Safety) ತೀವ್ರ ಕಳವಳ ವ್ಯಕ್ತವಾಗಿದೆ.
ಗೃಹ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2021ರಿಂದ 2026ರ ಜುಲೈ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 15,578 ಪ್ರಕರಣಗಳು ದಾಖಲಾಗಿವೆ.
ಇವುಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಧಿಕ (2,271) ಪ್ರಕರಣಗಳು ದಾಖಲಾಗಿದ್ದರೆ, ಶಿವಮೊಗ್ಗ ಜಿಲ್ಲೆಯಲ್ಲಿ (903) ಕನಿಷ್ಠ ಪ್ರಕರಣಗಳು ದಾಖಲಾಗಿವೆ. ಆದಾಗ್ಯೂ, ಸಮಾಜದ ಸಾಮಾನ್ಯ ಜನರಿಂದ ಹಿಡಿದು ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ವಿರುದ್ಧವೂ ದೂರುಗಳು ಕೇಳಿಬರುತ್ತಿವೆ.
ಪರಿಚಯಸ್ಥರಿಂದಲೇ ಹೆಚ್ಚಿನ ದೌರ್ಜನ್ಯ
ದಾಖಲಾಗಿರುವ ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತ ಮಕ್ಕಳಿಗೆ ಪರಿಚಯವಿರುವ ವ್ಯಕ್ತಿಗಳೇ ಆರೋಪಿಗಳಾಗಿದ್ದಾರೆ.
ಕುಟುಂಬಸ್ಥರು, ನೆರೆಹೊರೆಯವರು, ಸ್ನೇಹಿತರು ಹಾಗೂ ಹತ್ತಿರದ ಸಂಬಂಧಿಗಳೇ ಈ ಕೃತ್ಯಗಳಲ್ಲಿ ಭಾಗಿಯಾಗಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ತಿಳಿಸಿದ್ದಾರೆ.


