ಬೈಲಹೊಂಗಲ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಮಳಿಗೆಗಳ ಟೆಂಡರ್ ರದ್ದುಪಡಿಸಬೇಕು ಹಾಗೂ ದಲಿತ ಸಮುದಾಯದವರ ಮೇಲೆ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿವಶರಣ ಹರಳಯ್ಯ ಸಮಾಜ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಸೋಮವಾರ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಲಾಯಿತು.
ಬಸ್ ನಿಲ್ದಾಣದ ಕಾಂಪೌಂಡ್‌ಗೆ ಹೊಂದಿಕೊಂಡಿರುವ ನಗರಸಭೆಯ ಜಾಗದಲ್ಲಿ ಕಳೆದ 50ರಿಂದ 60 ವರ್ಷಗಳಿಂದ ಸುಮಾರು 17 ಕುಟುಂಬಗಳು ಪಾದರಕ್ಷೆಗಳ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿವೆ. ಇದೀಗ ನೂತನ ಮಳಿಗೆಗಳ ನಿರ್ಮಾಣದಿಂದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಆಗಸ್ಟ್ 3ರಂದು ಮಳಿಗೆಗಳ ಕಾಮಗಾರಿ ಆರಂಭಿಸಲು ಮುಂದಾದ ಸಂದರ್ಭದಲ್ಲಿ ಕೆಲವರು ತಮ್ಮ ಮೇಲೆ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಮಳಿಗೆಗಳ ಟೆಂಡರ್ ರದ್ದುಪಡಿಸುವುದರ ಜೊತೆಗೆ ಹಲ್ಲೆ ಮತ್ತು ಜಾತಿನಿಂದನೆ ಆರೋಪದ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಮ್ಮ ಬೇಡಿಕೆಗಳು ಈಡೇರುವವರೆಗೆ ಅಹೋರಾತ್ರಿ ಧರಣಿ ಮುಂದುವರಿಸುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸೇನೆಯ ಉತ್ತರ ಕರ್ನಾಟಕ ವಿಭಾಗೀಯ ಅಧ್ಯಕ್ಷ ಸಂಜೀವ ಮುರುಗೋಡ, ಹರಳಯ್ಯ ಸಮಾಜದ ಅಧ್ಯಕ್ಷ ಪರಶುರಾಮ ರಾಯಬಾಗ ಸೇರಿದಂತೆ ಅಶೋಕ ಸವದತ್ತಿ, ಅರ್ಜುನ ರಾಯಬಾಗ, ಮೋಹನ ಮುರುಗೋಡ, ರಾಜೇಶ ತೋರಗಲ್ಲ, ಶ್ರೀಕಾಂತ ದೊಡಮನಿ, ರಾಮು ಕಳಂಕರ, ಸುಭಾಸ್ ಸವದತ್ತಿ, ಉಮೇಶ ದೊಡಮನಿ, ಮಂಜುನಾಥ ಅಗಾಸಿ, ಸಂತೋಷ ದೊಡಮನಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ವರದಿ: ಸಮೀರ್ ಮುಲ್ಲಾನವರ


