ಮಾನ್ವಿ : ನಾಡು ನುಡಿ ಸಂಸ್ಕೃತಿ ಹಾಗೂ ಜನರ ರಕ್ಷಣೆಗಾಗಿ ವೀರಾವೇಶದಿಂದ ಹೋರಾಡಿದ ರಾಜಾ ವೀರ ಮದಕರಿ ನಾಯಕರು ಕನ್ನಡ ನಾಡಿನ ಹೆಮ್ಮೆಯ ವೀರಪುರುಷರು ಎಂದು ಶಿವರಾಜ ಸಾಹುಕಾರ ಹೇಳಿದರು.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ರಾಜಾ ವೀರ ಮದಕರಿ ನಾಯಕರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದರು.
ಚಿತ್ರದುರ್ಗದ ಏಳು ಸುತ್ತಿನ ಕೋಟೆಯನ್ನು ಶತ್ರುಗಳಿಂದ ರಕ್ಷಿಸುವಲ್ಲಿ ರಾಜಾ ವೀರ ಮದಕರಿ ನಾಯಕರ ಸಾಹಸ, ಧೈರ್ಯ ಮತ್ತು ಹೋರಾಟದ ಮನೋಭಾವ ಮಹತ್ವದ ಪಾತ್ರ ವಹಿಸಿದೆ. ಚಿತ್ರದುರ್ಗದ ಉಕ್ಕಿನ ಕೋಟೆ ದೇಶದಲ್ಲೇ ಅತ್ಯಂತ ಗಟ್ಟಿಮುಟ್ಟಾದ ಕೋಟೆಗಳಲ್ಲಿ ಒಂದಾಗಿದ್ದು, ಅದರ ರಕ್ಷಣೆಗೆ ನಾಯಕರು ತೋರಿದ ಪರಾಕ್ರಮ ಇಂದಿಗೂ ಸ್ಮರಣೀಯವಾಗಿದೆ ಎಂದು ತಿಳಿಸಿದರು.
ನಾಡಿನ ರಕ್ಷಣೆ ಹಾಗೂ ಜನರ ಒಳಿತಿಗಾಗಿ ವೀರ ಮದಕರಿ ನಾಯಕರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ದಕ್ಷಿಣ ಭಾರತದಲ್ಲಿ ಹಿಂದೂ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗಾಗಿ ನಾಯಕ ಸಮುದಾಯದ ಅನೇಕ ವೀರರು ಹೋರಾಡಿದ್ದಾರೆ. ಅವರ ತ್ಯಾಗ, ಶೌರ್ಯ ಮತ್ತು ದೇಶಪ್ರೇಮ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು. ಇಂತಹ ಮಹನೀಯರ ಜಯಂತಿಗಳನ್ನು ಆಚರಿಸುವುದರ ಜೊತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಉಪನ್ಯಾಸಕ ಅಂಬಣ್ಣ ನಾಯಕ ಉಮಳಿ ಹೊಸೂರು ಮಾತನಾಡಿ ಮಧ್ಯಕಾಲೀನ ಕರ್ನಾಟಕದ ವಿಜಯನಗರೋತ್ತರ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ ನಾಯಕ ಮನೆತನಗಳಲ್ಲಿ ಚಿತ್ರದುರ್ಗ ಸಂಸ್ಥಾನ ಪ್ರಮುಖ ಸ್ಥಾನ ಪಡೆದಿತ್ತು. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಅಧಿಕಾರಕ್ಕೆ ಬಂದ ನಾಯಕರು ನಂತರ ಸ್ವತಂತ್ರ ಆಡಳಿತ ನಡೆಸಿ ಚಿತ್ರದುರ್ಗವನ್ನು ಪ್ರಮುಖ ಆಡಳಿತ ಕೇಂದ್ರವನ್ನಾಗಿ ರೂಪಿಸಿದರು ಎಂದು ವಿವರಿಸಿದರು.
ಚಿತ್ರದುರ್ಗವನ್ನು ಕೇಂದ್ರವಾಗಿಸಿಕೊಂಡು ಹಲವು ನಾಯಕ ಅರಸರು ಆಡಳಿತ ನಡೆಸಿದ್ದು ಅವರಲ್ಲಿ ಐದನೇ ರಾಜಾ ವೀರ ಮದಕರಿ ನಾಯಕರು ಪ್ರಸಿದ್ಧರಾಗಿದ್ದಾರೆ. ಕನ್ನಡ ನಾಡಿನ ಭಾಷೆ ಸಂಸ್ಕೃತಿ ಹಾಗೂ ಜನರ ರಕ್ಷಣೆಗಾಗಿ ಅವರು ನಡೆಸಿದ ಹೋರಾಟಗಳು ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿವೆ. ಅವರ ತ್ಯಾಗ, ಸಾಹಸ ಮತ್ತು ಆಡಳಿತದ ಕೊಡುಗೆಗಳು ಎಂದೆಂದಿಗೂ ಅವಿಸ್ಮರಣೀಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಬೇಡರ ಸಮಿತಿ ರಾಜ್ಯಾಧ್ಯಕ್ಷ ಅಂಬಣ್ಣ ನಾಯಕ ಗುಜ್ಜಲ್ ಮಾತನಾಡಿ ವಿಜಯನಗರ ಸಾಮ್ರಾಜ್ಯಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ನಾಯಕ ಮನೆತನದ ವೀರರು ನಾಡು ದೇಶ ಸಂಸ್ಕೃತಿ ಮತ್ತು ಸಮಾಜದ ರಕ್ಷಣೆಗಾಗಿ ಹೋರಾಡಿದ್ದಾರೆ. ಅಂತಹ ವೀರ ಪರಂಪರೆಯಲ್ಲಿ ರಾಜಾ ವೀರ ಮದಕರಿ ನಾಯಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ವೀರ ಮದಕರಿ ನಾಯಕರು ಧೈರ್ಯ ನಿಷ್ಠೆ ಪ್ರಾಮಾಣಿಕತೆ ಮತ್ತು ಶೌರ್ಯಕ್ಕೆ ಹೆಸರುವಾಸಿಯಾಗಿದ್ದರು. ಅವರ ಸಾಧನೆ ಹಾಗೂ ಪರಾಕ್ರಮದ ಹಿನ್ನೆಲೆಯಲ್ಲಿ ಹಲವು ಬಿರುದುಗಳಿಂದ ಗೌರವಿಸಲ್ಪಟ್ಟಿದ್ದರು. ಅವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಮತ್ತು ಅವರ ಆದರ್ಶಗಳನ್ನು ಉಳಿಸಿ ಬೆಳೆಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಯ್ಡು ನಾಯಕ ಮಾನ್ವಿ, ವೀರನಗೌಡ ಮಾಲಿಪಾಟೀಲ್ ನಲಗಂದಿನ್ನಿ,ಸಿದ್ರಾಮಪ್ಪ ಸಾಹುಕಾರ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಭಾಗಯ್ಯ ನಾಯಕ, ಪುರಸಭೆಯ ಮಾಜಿ ಸದಸ್ಯ ವೆಂಕಟೇಶ್ ನಾಯಕ, ಕೊಂಡಯ್ಯ ನಾಯಕ ಮಾನ್ವಿ ತಾಲೂಕ ಪ್ರದಾನ ಕಾರ್ಯದರ್ಶಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಾನ್ವಿ,ಹನುಮೇಶ ನಾಯಕ ಸಾದಾಪುರ ಜಿಲ್ಲಾಧ್ಯಕ್ಷರು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಯಚೂರು ಪ್ರಭುರಾಜ್ ಕೊಡ್ಲಿ, ಜಿ. ನರಸಿಂಹ ನಾಯಕ ಕರಡಿಗುಡ್ಡ, ಅಮರೇಶ್ ನಾಯಕ, ಈರಣ್ಣ ನಾಯಕ, ಮಾರೆಪ್ಪ ನಾಯಕ ಬಲ್ಲಟಗಿ, ತಿಮ್ಮೇಶ ನಾಯಕ, ದೇವಪ್ಪ ನಾಯಕ, ಮ ರಮೇಶ ನಾಯಕ ಕಪಗಲ್ ತಾಲೂಕಾಧ್ಯಕ್ಷರು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಾನ್ವಿ,ನಾಗಪ್ಪ ನಾಯಕ ಅರಕೇರಾ, ವಕೀಲ ಬಸವಲಿಂಗ ನಾಯಕ, ಜಗದೀಶ್ ನಾಯಕ ನಲಗಂದಿನ್ನಿ, ವೀರೇಶ ನಾಯಕ, ಮಹೇಶ್ ಕುಮಾರ ಬೆಟ್ಟದೂರು ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.
ವರದಿ : ಆಂಜನೇಯ ನಸಲಾಪುರ


