ದಕ್ಷಿಣಕನ್ನಡ : ಜಿಲ್ಲೆಯ ಪುತ್ತೂರಿನಲ್ಲಿ ಮುಂಬೈ ಪೊಲೀಸರು ಹಾಗೂ ಉಗ್ರ ನಿಗ್ರಹ ದಳದ (ATS) ಅಧಿಕಾರಿಗಳ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿ, ಬರೋಬ್ಬರಿ 1.31 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ವಿಡಿಯೋ ಕರೆಯ ಮೂಲಕ ಬಂದನದ ಭೀತಿ ಹುಟ್ಟಿಸಿದ ವಂಚಕರು, ಈ ಕೃತ್ಯ ಎಸಗಿದ್ದಾರೆ.
ಹಣ ವರ್ಗಾವಣೆ ಪ್ರಕರಣದಿಂದ ಮುಕ್ತಿ ನೀಡುವುದಾಗಿ ನಂಬಿಸಿ ಹಂತ ಹಂತವಾಗಿ ಒಟ್ಟು 1.31 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಲಾಗಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾರ್ವಜನಿಕರು ಇಂತಹ ಯಾವುದೇ ಅಪರಿಚಿತ ವಿಡಿಯೋ ಕರೆಗಳು ಮತ್ತು ಡಿಜಿಟಲ್ ಅರೆಸ್ಟ್ ಬೆದರಿಕೆಗಳಿಗೆ ಆತಂಕಗೊಳ್ಳದೆ, ತಕ್ಷಣವೇ ಸೈಬರ್ ಕ್ರೈಮ್ ಠಾಣೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


