ಬೆಳಗಾವಿ: ನಗರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸುತ್ತಿದ್ದ ಪ್ರಭಾವಿ ರಾಜಕಾರಣಿಗಳ ಒಡೆತನದ ಪ್ರತಿಷ್ಠಿತ ಕ್ಲಬ್, ಹೋಟೆಲ್ ಹಾಗೂ ಪಬ್‌ಗಳ ಮೇಲೆ ಬೆಳಗಾವಿ ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ ನೇತೃತ್ವದಲ್ಲಿ ಏಕಕಾಲಕ್ಕೆ 40ಕ್ಕೂ ಹೆಚ್ಚು ಕಡೆ ದಿಢೀರ್ ದಾಳಿ ನಡೆಸಲಾಗಿದೆ.
ಈ ವೇಳೆ ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದು, ನಿಯಮ ಉಲ್ಲಂಘಿಸಿದ ಕ್ಲಬ್ ಮತ್ತು ಪಬ್‌ಗಳನ್ನು ಪೊಲೀಸರು ಮುಚ್ಚಿಸಿದ್ದಾರೆ. ವಿಶೇಷವಾಗಿ ದಾಳಿಯ ವೇಳೆ ಕೆಲವು ಕಡೆಗಳಲ್ಲಿ ಅಪ್ರಾಪ್ತ ವಯಸ್ಸಿನವರು ಕೂಡ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಿರುವ ಕಮಿಷನರ್ ಪ್ರಕಾಶ್ ನಿಕ್ಕಂ, ಕ್ಲಬ್, ಹೋಟೆಲ್ ಹಾಗೂ ಡಾಬಾಗಳಲ್ಲಿ ಗ್ರಾಹಕರ ಐಡಿ ಕಾರ್ಡ್ ಪರಿಶೀಲಿಸಲಾಗಿದ್ದು, ನಿಯಮ ಮೀರಿರುವುದು ಕಂಡುಬಂದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರಾತ್ರಿ 11 ರ ನಂತರ ಎಲ್ಲಾ ವ್ಯವಹಾರಗಳನ್ನು ಕಡ್ಡಾಯವಾಗಿ ಬಂದ್ ಮಾಡುವಂತೆ ಸೂಚಿಸಿರುವ ಅವರು, ಮುಂಬರುವ ದಾಂಡಿಯಾ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


