ಜೇನೀವಾ: ಪೂರ್ವ ಆಫ್ರಿಕಾದ ಜಿಬೌಟಿ (Djibouti) ಕರಾವಳಿಯ ಬಳಿ ವಲಸಿಗರಿದ್ದ (migrants ) ಬೋಟ್ (boat) ಮಗುಚಿ ಬಿದ್ದ ಪರಿಣಾಮ 15 ಮಕ್ಕಳು ಸೇರಿದಂತೆ ಕನಿಷ್ಠ 109 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ.
305 ಜನರನ್ನು ಹೊತ್ತೊಯ್ಯುತ್ತಿದ್ದ ಈ ಬೋಟ್ ಅಪಘಾತಕ್ಕೀಡಾಗಿದ್ದು, ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (IOM) ಭಾನುವಾರ ಈ ಭೀಕರ ದುರಂತವನ್ನು ದೃಢಪಡಿಸಿದೆ.
ಜಿಬೌಟಿಯಿಂದ ಯೆಮೆನ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಗುರುವಾರ ರಾತ್ರಿ ಅಥವಾ ಶುಕ್ರವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ.
ಮೃತಪಟ್ಟ 109 ಜನರಲ್ಲಿ 52 ಪುರುಷರು, 42 ಮಹಿಳೆಯರು ಮತ್ತು 15 ಮಕ್ಕಳು ಸೇರಿದ್ದಾರೆ. ಈ ದುರಂತದಲ್ಲಿ 80ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಇನ್ನೂ 116ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಉದ್ಯೋಗ, ಉತ್ತಮ ಜೀವನೋಪಾಯ ಹಾಗೂ ಭದ್ರತೆಯ ಹುಡುಕಾಟದಲ್ಲಿ 'ಹಾರ್ನ್ ಆಫ್ ಆಫ್ರಿಕಾ' ಭಾಗದ ಹತ್ತಾರು ಸಾವಿರ ವಲಸಿಗರು ಪ್ರತಿನಿತ್ಯ ಜಿಬೌಟಿ ಮತ್ತು ಬಾಬ್ ಎಲ್-ಮಂಡೆಬ್ ಜಲಸಂಧಿಯ ಮೂಲಕ ಗಲ್ಫ್ ದೇಶಗಳತ್ತ ಸಾಗುತ್ತಾರೆ.
ಯೆಮೆನ್‌ನಲ್ಲಿ ಆಂತರಿಕ ಹಿಂಸಾಚಾರ ಮತ್ತು ಸಂಘರ್ಷಗಳು ಮುಂದುವರಿದಿದ್ದರೂ ಸಹ, ಉದ್ಯೋಗದ ನಿರೀಕ್ಷೆಯಲ್ಲಿ ಜನರು ಈ ಅಪಾಯಕಾರಿ ಸಮುದ್ರ ಮಾರ್ಗವನ್ನು ಬಳಸುತ್ತಲೇ ಇದ್ದಾರೆ.
ಇದು ಅತ್ಯಂತ ಆಘಾತಕಾರಿ ಮತ್ತು ದುಃಖಕರ ಜೀವಹಾನಿಯಾಗಿದೆ" ಎಂದು ಜಿಬೌಟಿಯ IOM ಮಿಷನ್ ಮುಖ್ಯಸ್ಥ ಅಲೆಕ್ಸಾಂಡರ್ ಕೊಯಿಸಾಕ್ ಕಳವಳ ವ್ಯಕ್ತಪಡಿಸಿದ್ದಾರೆ.
"ಉತ್ತಮ ಭವಿಷ್ಯ ಮತ್ತು ಆರ್ಥಿಕ ಅವಕಾಶಗಳನ್ನು ಹುಡುಕಿಕೊಂಡು ಹೊರಡುವ ವಲಸಿಗರು ಈ ಅಪಾಯಕಾರಿ ಮಾರ್ಗದಲ್ಲಿ ಎಂತಹ ಭೀಕರ ಅಪಾಯಗಳನ್ನು ಎದುರಿಸುತ್ತಿದ್ದಾರೆ ಎಂಬುದಕ್ಕೆ ಈ ದುರಂತವೇ ಸಾಕ್ಷಿ" ಎಂದು ಅವರು ಕಂಬನಿ ಮಿಡಿದಿದ್ದಾರೆ.


