ಮೈಸೂರು : ಮೈಸೂರು ದಸರಾ 2026 ಮಹೋತ್ಸವಕ್ಕೆ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು, ಧರ್ಮದ ಕುರಿತು ಆಳವಾದ ಹಾಗೂ ಅರ್ಥಪೂರ್ಣ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.
ಮನುಷ್ಯನನ್ನು ಕೇವಲ ಸ್ವರ್ಗಕ್ಕೆ ಕರೆದುಕೊಂಡು ಹೋಗುವುದೇ ಧರ್ಮವಲ್ಲ, ಬದಲಾಗಿ ಮನುಷ್ಯನಿರುವ ಈ ಭೂಮಿಯನ್ನೇ ಸ್ವರ್ಗದ ದೃಶ್ಯವನ್ನಾಗಿ ಪರಿವರ್ತಿಸುವುದೇ ನಿಜವಾದ ಧರ್ಮದ ಅಂತಿಮ ಉದ್ದೇಶ ಎಂದು ಅವರು ಅಭಿಪ್ರಾಯಪಟ್ಟರು.
ಧರ್ಮದ ವ್ಯಾಖ್ಯಾನವನ್ನು ಸರಳವಾಗಿ ವಿವರಿಸಿದ ಶ್ರೀಗಳು, ಮಹಾನ್ ಕವಿ ಸರ್ವಜ್ಞನ ವಚನಗಳನ್ನು ಉದಾಹರಿಸಿದರು. ಬಾಯಾರಿದವರಿಗೆ ನೀರು ನೀಡುವುದು, ಹಸಿದವರಿಗೆ ಅನ್ನ ದಾಸೋಹ ಮಾಡುವುದು ಮತ್ತು ದುಃಖದಿಂದ ಅಳುತ್ತಾ ಬರುವವರ ಕಣ್ಣೀರು ಒರೆಸಿ ಎರಡು ಪ್ರೀತಿಯ ಮಾತುಗಳನ್ನು ಆಡುವುದೇ ನಿಜವಾದ ಧರ್ಮ ಎಂದು ತಿಳಿಸಿದರು. ಧರ್ಮ ಎಂದರೆ ಇತರೆ ವ್ಯಕ್ತಿಗಳನ್ನು ತುಳಿದು ಮುಂದೆ ಬರುವುದಲ್ಲ, ಬದಲಾಗಿ ಪರಸ್ಪರ ಅರಿತು, ಜೊತೆಯಾಗಿ ಬಾಳುವುದೇ ನಿಜವಾದ ಧರ್ಮ ಎಂದು ಶ್ರೀಗಳು ಸಾರಿದರು.


