ಬೈಲಹೊಂಗಲ: ಅಕ್ರಮವಾಗಿ 24 ಸಾವಿರ ಲೀಟರ್ ಮದ್ಯಸಾರ ಸಾಗಿಸುತ್ತಿದ್ದ 12 ಚಕ್ರದ ಟ್ಯಾಂಕರ್‌ವೊಂದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶನಿವಾರ ಬೆಳಗಿನ ಜಾವ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಸಮೀಪ ಜಪ್ತಿ ಮಾಡಿದ್ದಾರೆ.
ಹೊಳಿಹೊಸೂರು ಗ್ರಾಮದಿಂದ ಎಂ.ಕೆ. ಹುಬ್ಬಳ್ಳಿ ಪಟ್ಟಣಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ, ಪಟ್ಟಣದ ಸಮೀಪ ಶನಿವಾರ (ಅ.10) ಬೆಳಗಿನ ಜಾವ 12.25ರ ಸುಮಾರಿಗೆ ರಸ್ತೆ ಗಸ್ತು ನಡೆಸುತ್ತಿದ್ದ ವೇಳೆ ಭಾರತ್ ಬೆಂಜ್ ಕಂಪನಿಯ ಕೆಎ-25 ಎಎ-3750 ನೋಂದಣಿ ಸಂಖ್ಯೆಯ ಟ್ಯಾಂಕರ್‌ನಲ್ಲಿ ಮದ್ಯಸಾರ ಸಾಗಿಸುತ್ತಿರುವುದು ಪತ್ತೆಯಾಗಿದೆ.
ವಾಹನ ಹಾಗೂ ಮುದ್ದೆಮಾಲು ಸೇರಿ ಒಟ್ಟು ₹32.40 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ವಾಹನದ ಚಾಲಕ ವಿಜಯಪುರ ಜಿಲ್ಲೆಯ ಬೋಳಚಿಕ್ಕಲಕಿ ಗ್ರಾಮದ ಬಂದೇನವಾಜ ನಬಿ ಸಾಬ್ ತಿಗಣಿಬಿದರಿ ಅವರಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)–2023ರ ಕಲಂ 35(3)ರ ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಅಲ್ಲದೆ, ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಲಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.
ಅಬಕಾರಿ ಅಪರ ಆಯುಕ್ತರು, ಬೆಳಗಾವಿ ಕೇಂದ್ರ ಸ್ಥಾನ ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ, ಬೆಳಗಾವಿ ದಕ್ಷಿಣ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಮತ್ತು ರಾಮದುರ್ಗ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಬೈಲಹೊಂಗಲ ವಲಯದ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಅಬಕಾರಿ ನಿರೀಕ್ಷಕ ಶ್ರೀಶೈಲ ಅಕ್ಕಿ, ಉಪ ನಿರೀಕ್ಷಕ ಮಹಾದೇವ ಗುಡ್ಡದ, ವಿರೇಶ ಯರಗೊಪ್ಪ ಹಾಗೂ ಸಿಬ್ಬಂದಿಗಳಾದ ನಿಂಗನಾಯ್ಕ ದಾದನಾಯ್ಕರ, ಎಂ.ಬಿ. ಮುಲ್ಲಾ, ವಿಠ್ಠಲ ಕೇರಾಳಿ, ಎನ್.ವೈ. ಟಗರಿ ಮತ್ತು ಗೃಹರಕ್ಷಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಸಮೀರ್ ಮುಲ್ಲಾನವರ


