ಬೆಳಗಾವಿ : ರಾಜಧಾನಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು (Prajwal Revanna), ತಕ್ಷಣದಿಂದಲೇ (Breaking) ಜಾರಿಗೆ ಬರುವಂತೆ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಿ ಆದೇಶಿಸಲಾಗಿದೆ.
ಪ್ರಜ್ವಲ್ ರೇವಣ್ಣನನ್ನು ಇರಿಸಲಾಗಿದ್ದ ಜೈಲಿನ ಬ್ಯಾರಕ್‌ನಲ್ಲಿ ಇತ್ತೀಚೆಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಈ ವೇಳೆ ಅವರ ಸೆಲ್‌ನಲ್ಲಿ ನಿಷೇಧಿತ ಮೊಬೈಲ್ ಫೋನ್, ಪೆನ್‌ಡ್ರೈವ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಅತ್ಯಂತ ಭದ್ರತೆ ಇರುವ ಜೈಲಿನ ಆವರಣದೊಳಗೆ ಇಂತಹ ಉಪಕರಣಗಳು ತಲುಪಿರುವುದು ಕಾರಾಗೃಹದ ಭದ್ರತಾ ವ್ಯವಸ್ಥೆಯಲ್ಲಾದ ಗಂಭೀರ ಲೋಪವನ್ನು ಎತ್ತಿಹಿಡಿದಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಮತ್ತು ಆಡಳಿತ ಸುಧಾರಣೆ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು, ಮುಂಜಾಗ್ರತಾ ಕ್ರಮವಾಗಿ ಮತ್ತು ಹೆಚ್ಚಿನ ಭದ್ರತೆಯ ಹಿತದೃಷ್ಟಿಯಿಂದ ಪ್ರಜ್ವಲ್ ರೇವಣ್ಣನನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲು ಸೂಚಿಸಿದ್ದಾರೆ.
ಜೈಲಿನ ನಿಯಮಾವಳಿಗಳನ್ನು ಉಲ್ಲಂಘಿಸಿ ಉಪಕರಣಗಳನ್ನು ಪೂರೈಸಿದವರ ವಿರುದ್ಧವೂ ಕಟ್ಟುನಿಟ್ಟಿನ ತನಿಖೆ ಹಾಗೂ ಕ್ರಮಕ್ಕೆ ಇಲಾಖೆ ಮುಂದಾಗಿದೆ. ಪ್ರಜ್ವಲ್ ರೇವಣ್ಣ ಇಂದು ಸಂಜೆ ಅಥವಾ ನಾಳೆಗೆ ಸ್ಥಳಾಂತರವಾಗೋ ಸಾಧ್ಯತೆ ಇದೆ.


