ಮಾನ್ವಿ: ಪಟ್ಟಣದ ಜಯನಗರದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಉಡುಪಿ ಶ್ರೀ ಪಾಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿ, ಶ್ರೀ ಲಕ್ಷ್ಮೀನಾರಾಯಣ ದೇವರ ದರ್ಶನ ಪಡೆದು ಭಕ್ತರಿಗೆ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಭಗವಂತನ ಉಪಾಸನೆ ಅತ್ಯಗತ್ಯವಾಗಿದೆ. ಮುಖ್ಯಪ್ರಾಣ ದೇವರು ನಮ್ಮ ದೇಹದಲ್ಲಿನ ಪ್ರಮುಖ ಶಕ್ತಿಯಾಗಿದ್ದು, ವಾಯುದೇವರ ನಿತ್ಯ ಉಪಾಸನೆಯಿಂದ ನಮ್ಮ ಶರೀರದಲ್ಲಿನ ಇಂದ್ರಿಯಗಳಿಗೆ ಚೈತನ್ಯ ದೊರೆಯುತ್ತದೆ. ಸತ್ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು, ಭಗವಂತನನ್ನು ನಿತ್ಯ ಧ್ಯಾನಿಸಿದಲ್ಲಿ ಮಾತ್ರ ಆತನ ಅನುಗ್ರಹವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ದೇವಸ್ಥಾನದ ಅರ್ಚಕರಾದ ಆನಂದರಾವ್, ರಘೋತ್ತಮರಾವ್ ಸೇರಿದಂತೆ ವಾರ್ಡ್‌ನ ಭಕ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಟ್ಟಣದ ಡಾ. ಆರ್. ಶ್ರೀಪಾದ ಶೆಟ್ಟಿಯವರ ನಿವಾಸದಲ್ಲಿ ಉಡುಪಿ ಶ್ರೀ ಪಾಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಸಂಸ್ಥಾನ ಪೂಜೆಯನ್ನು ನೆರವೇರಿಸಿದರು. ಶಾಸಕ ಹಂಪಯ್ಯನಾಯಕ ಅವರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ದರ್ಶನ ಪಡೆದು, ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದರು.
ವರದಿ :ಆಂಜನೇಯ ನಸಲಾಪುರ


