ಬೆಂಗಳೂರು: ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ-ಜೆಡಿಎಸ್ ನಡೆಸಿದ ನಿರಂತರ ಹೋರಾಟ ಮತ್ತು ದಾಖಲೆ ಸಮೇತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದಾರೆ.
ಇದು ಕೇವಲ ಬಿಜೆಪಿಗೆ ಸಿಕ್ಕಿರುವ ಜಯವಲ್ಲ, ಇದು ಇಡೀ ದಲಿತ ಸಮುದಾಯಕ್ಕೆ ಸಂದಿರುವ ಜಯ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ಆರಂಭವಾದಾಗಿನಿಂದ ಎಂಟು ದಿನಗಳ ಕಾಲ ನಿರಂತರವಾಗಿ ನಾವು ಹೋರಾಟ ಮಾಡಿದ್ದೇವೆ. ದಲಿತರ ಹಣ ನುಂಗಿದರೆ ಉಳಿಗಾಲವಿಲ್ಲ ಎಂಬ ಪಾಠವನ್ನು ಕಾಂಗ್ರೆಸ್‌ಗೆ ಕಲಿಸಿದ್ದೇವೆ ಎಂದರು.
ಬಿಜೆಪಿ-ಜೆಡಿಎಸ್ ಒಗ್ಗಟ್ಟಿನಿಂದ ಹೋರಾಟ ಮಾಡಿ ನಾಗೇಂದ್ರ ಅವರ ರಾಜೀನಾಮೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿವೆ. ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಘಟನೆ ನಡೆದಿದೆ. ನಮ್ಮ ಹೋರಾಟ ಹಾಗೂ ಗುರಿ ಸ್ಪಷ್ಟವಾಗಿತ್ತು ಎಂದು ವಿಶ್ಲೇಷಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾನು ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿ, ನಂತರ ನಿಯಮ 69ರ ಅಡಿ ಎರಡೂವರೆ ಗಂಟೆಗಳ ಕಾಲ ಈ ಬಗ್ಗೆ ಮಾತಾಡಿದ್ದೆ. ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ್ದ ಸಿದ್ದರಾಮಯ್ಯನವರು 89 ಕೋಟಿ ರೂ. ಹಗರಣ ನಡೆದಿದೆ ಎಂದು ಒಪ್ಪಿಕೊಂಡಿದ್ದರು ಎಂದು ಸ್ಪಷ್ಟಪಡಿಸಿದ್ದರು.
ಪಕ್ಷಕ್ಕಾಗಿ ಲೂಟಿ ಮಾಡಿದ್ದರಾ?
ಆ ನಂತರ ನಾಗೇಂದ್ರ ರಾಜೀನಾಮೆ ನೀಡಿದ್ದರು. ಈಗ ನಾಗೇಂದ್ರ ಅವರೇ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ಮುಖ್ಯ ಎಂಬ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.
ಪಕ್ಷ ಮುಖ್ಯ ಎಂದ ಮೇಲೆ ದಲಿತರ ಹಣವನ್ನು ಹೇಗೆ ಲೂಟಿ ಮಾಡಿದರು? ದಲಿತರ ಹಣ ಲೂಟಿ ಮಾಡಿ ಎಂದು ಪಕ್ಷದಿಂದಲೇ ಸೂಚನೆ ಬಂದಿತ್ತೇ? ದಲಿತರ ಹಣ ತಿಂದ ನಂತರ ಅದು ಖಂಡಿತ ಮುಜುಗರ ಆಗಲೇಬೇಕು ಎಂದು ವ್ಯಂಗ್ಯವಾಡಿದರು.
ಲೂಟಿ ಮಾಡಿದ 187 ಕೋಟಿ ರೂ. ಹಣ ತೆಲಂಗಾಣಕ್ಕೆ ಹೋಗಿತ್ತು. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಚಾರ್ಜ್‌ಶೀಟ್‌ನಲ್ಲಿ ಈ ಬಗ್ಗೆ ನಿಖರವಾದ ಮಾಹಿತಿ ಇದೆ. ಸಿಎಂ ಡಿ.ಕೆ.ಶಿವಕುಮಾರ್ ಪ್ರಕಾರ ನಾಗೇಂದ್ರ ಅಮಾಯಕರಾಗಿದ್ದರೆ, ಎಲ್ಲ ಚಾರ್ಜ್‌ಶೀಟ್‌ಗಳಲ್ಲೂ ಅವರು ಆರೋಪಿಯಾಗುತ್ತಿರಲಿಲ್ಲ. ಜೊತೆಗೆ ಇವರ ಬಲಗೈ ನೆಕ್ಕಂಟಿ ನಾಗರಾಜ್ ಮೇಲೆ ಕೂಡ ಆರೋಪ ಇದೆ. ಈ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗಿತ್ತು.
ನಾಗೇಂದ್ರ ಹೆಸರಲ್ಲಿ ನಾವು ಟಾರ್ಗೆಟ್ ಮಾಡುತ್ತಿದ್ದೇವೆ ಅನ್ನುತ್ತಿದ್ದಾರೆ, ಆತ್ಮಹತ್ಯೆ ಮಾಡಿಕೊಂಡ ಪಿ.ಚಂದ್ರಶೇಖರನ್ ಕೂಡ ದಲಿತರೇ ಆಗಿದ್ದರು ಎಂಬುದನ್ನು ಮರೆಯಬಾರದು.
ಆ ದಲಿತ ಅಧಿಕಾರಿಗೆ ನ್ಯಾಯವಿಲ್ಲ, ಅವರ ಕುಟುಂಬದವರಿಗೆ ನ್ಯಾಯ ಸಿಕ್ಕಿಲ್ಲ. ಅಂತಹ ಅಧಿಕಾರಿಯ ಮನೆಗೆ ಹೋಗಿ ಕಾಂಗ್ರೆಸ್‌ನವರು ಸಾಂತ್ವನ ಹೇಳಿಲ್ಲ. ಈ ಪ್ರಕರಣದಲ್ಲಿ ಹಣದ ದುರ್ಬಳಕೆ ನಡೆದು ಬೇನಾಮಿ ಟೆಂಡರ್ ನೀಡಲಾಗಿತ್ತು.
ಈ ಅಕ್ರಮಕ್ಕಾಗಿ ಒಬ್ಬ ದಲಿತ ಅಧಿಕಾರಿ ಸಾಯಬಹುದು. ಆದರೆ ಸಚಿವರ ರಾಜೀನಾಮೆ ಪಡೆಯಬಾರದು ಎಂಬುದು ಕಾಂಗ್ರೆಸ್ ನಿಲುವು ಎಂದು ಹರಿಹಾಯ್ದರು.
ಅಧಿಕಾರಿಗೆ ಅನ್ಯಾಯವಾದರೆ ನ್ಯಾಯ ಕೊಡಬೇಡಿ, ಸಚಿವನಿಗೆ ಅನ್ಯಾಯ ಎನ್ನಿಸಿದರೆ ನ್ಯಾಯ ಕೊಡಿ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆಯೇ? ಇದು ಯಾವ ರೀತಿಯ ದಲಿತ ನ್ಯಾಯ ಎಂದು ಪ್ರಶ್ನಿಸಿದರು.
ಪಿ.ಚಂದ್ರಶೇಖರನ್ ಕುಟುಂಬಕ್ಕೆ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ಇನ್ನೂ ನೀಡಿಲ್ಲ. ಅವರ ಮಗನಿಗೆ ಉದ್ಯೋಗ ಕೊಡುತ್ತೇನೆಂದು ಘೋಷಣೆ ಮಾಡಿ, ಅದನ್ನೂ ಮಾಡಿಲ್ಲ. ಆದರೆ ನಾಗೇಂದ್ರಗೆ ಮಾತ್ರ ಅನ್ಯಾಯವಾಗಿದೆ.
ಇಡೀ ಕರ್ನಾಟಕದಲ್ಲಿ ನಾಗೇಂದ್ರ ಒಬ್ಬರೇ ದಲಿತರಾ? ದಲಿತರ 187 ಕೋಟಿ ರೂ. ದಲಿತರ ಪ್ರದೇಶಾಭಿವೃದ್ಧಿಗೆ, ಅವರ ಮಕ್ಕಳ ಶಾಲೆಗೆ, ಉದ್ಯೋಗ ಯೋಜನೆಗಳಿಗೆ ಬಳಕೆಯಾಗಬೇಕಿತ್ತು. ನಾವು ಇದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದ ಮೇಲೆ ಇದು ಹೇಗೆ ದಲಿತರ ವಿರೋಧಿ ನಿಲುವಾಗುತ್ತದೆ? ನಾನು ಅಧಿವೇಶನದಲ್ಲಿ ಸರಿಯಾದ ದಾಖಲೆಗಳನ್ನು ನೀಡಿದ್ದೇನೆ.
ಸುಮ್ಮನೆ ಮಾತಾಡಲು ಇದು ಕಡಲೆಕಾಯಿ ವ್ಯಾಪಾರವಲ್ಲ. ಅಧಿಕಾರಿ ಆತ್ಮಹತ್ಯೆ ಪತ್ರದಲ್ಲಿ ಹಣದ ಮೊತ್ತ ನಮೂದಿಸಿರುವ ಬಗ್ಗೆ ನಾನು ದಾಖಲೆಗಳನ್ನು ನೀಡಿದ್ದೇನೆ. ಸಿಬಿಐ ಪ್ರಕಟಿಸಿದ್ದ ಅಂಶಗಳನ್ನು ಕೂಡ ದಾಖಲೆಯಾಗಿ ಸದನಕ್ಕೆ ನೀಡಿದ್ದೇನೆ. ಸಿಬಿಐ ಪ್ರಕಟಣೆಯಲ್ಲೇ ನಾಗೇಂದ್ರ ಅವರನ್ನು ʼಕಿಂಗ್‌ಪಿನ್ʼ ಎಂದು ಉಲ್ಲೇಖಿಸಸಲಾಗಿದೆ. ಇದು ತಪ್ಪಾಗಿದ್ದರೆ ಸಿಬಿಐ ಹಾಗೂ ಇಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಿತ್ತು ಎಂದು ಸವಾಲು ಹಾಕಿದರು.


