ಉಡುಪಿ: ಬ್ರಹ್ಮಾವರದ ವಾರಂಬಳ್ಳಿ ಫ್ರೆಂಡ್ಸ್ ಆಯೋಜಿಸಿದ್ದ ಹುಲಿವೇಷ ಸೇವಾ ಸಮಿತಿಯ ಊದು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್"ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗೆ ಹಿಂದೂ ಹೆಣ್ಣುಮಕ್ಕಳು(Girls) ಹುಲಿಯಾಗಬೇಕು ಹಾಗೂ ಅಗತ್ಯಬಿದ್ದರೆ ಪ್ರಾಣ ಕೊಡಲು ಸಿದ್ಧರಾಗಬೇಕು" ಎಂದು ಕರೆ ನೀಡಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಕೇರಳ, ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ನಿರ್ಮಾಣವಾಗಿರುವ ಪರಿಸ್ಥಿತಿಯನ್ನು ಪ್ರತಿಯೊಬ್ಬರೂ ಒಮ್ಮೆ ಗಮನಿಸಬೇಕು ಎಂದು ಹೇಳಿದರು. ನಮ್ಮ ಪುಣ್ಯ ಕ್ಷೇತ್ರಗಳು ಹಾಗೂ ಧರ್ಮಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಮತ್ತು ಅಪಪ್ರಚಾರ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ.
ದೇಶದ್ರೋಹಿಗಳು ಹಾಗೂ ಮತಾಂತರ ಮಾಡುವ ಶಕ್ತಿಗಳು ದೊಡ್ಡ ಮಟ್ಟದ ಜಾಲ ಹೆಣೆದಿದ್ದು, ಧರ್ಮಸ್ಥಳವನ್ನು ಅಂತಹ ಕೃತ್ಯಗಳ ಪ್ರಯೋಗಶಾಲೆಯಾಗಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲೆಡೆ ಲವ್ ಜಿಹಾದ್ ನಂತಹ ಕೆಟ್ಟ ಸಂಸ್ಕೃತಿ ಮತ್ತು ದೇಶದ್ರೋಹಿಗಳ ಆಟಾಟೋಪ ಹೆಚ್ಚಾಗಿದ್ದು, ಎಲ್ಲೋ ನಮ್ಮ ಧರ್ಮ ನಶಿಸಿಹೋಗುತ್ತದೆಯೋ ಎಂಬ ಭೀತಿ ಕಾಡುತ್ತಿದೆ ಎಂದು ಯತ್ನಾಳ್ ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ ಕರಾವಳಿ ಭಾಗದ ಜನರನ್ನು ಶ್ಲಾಘಿಸಿದ ಅವರು, "ಇಂದಿಗೂ ಹಿಂದುತ್ವ ಸಜೀವವಾಗಿ ಉಳಿಯಲು ಕರಾವಳಿಯ ನಿಜವಾದ ಹಿಂದೂಗಳೇ ಪ್ರಮುಖ ಕಾರಣ" ಎಂದು ಬಣ್ಣಿಸಿದರು


