ಬೆಂಗಳೂರು: ಸರ್ವರ್ ಸಮಸ್ಯೆಯಿಂದ ಪಡಿತರ ಚೀಟಿ ಇ-ಕೆವೈಸಿ ಮಾಡಿಸುವ ಪ್ರಕ್ರಿಯೆ ತೀವ್ರ ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಇ-ಕೆವೈಸಿ ನೀಡಲು ನಿಗದಿಪಡಿಸಿದ್ದ ಗಡುವನ್ನು ಅ.20ರ ವರೆಗೆ ಸರಕಾರ ವಿಸ್ತರಿಸಿದೆ.
ಅಲ್ಲದೆ, ಫಲಾನುಭವಿಗಳ ಅನುಕೂಲಕ್ಕಾಗಿ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲಿರುವ ವೇಳಾಪಟ್ಟಿಯನ್ನೂ ಅ.1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
ಇದರೊಂದಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4ರಿಂದ ರಾತ್ರಿ 9ರ ವರೆಗೆ ಸಮಯ ವಿಸ್ತರಿಸಲಾಗಿದೆ.
ರಾಜ್ಯದಲ್ಲಿ 5 ವರ್ಷ ಪೂರ್ಣಗೊಂಡಿರುವ ಒಟ್ಟು 2,67,64,276 ಫಲಾನುಭವಿಗಳ ಮರು ಇ-ಕೆವೈಸಿ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕೆ ಸೆ.30 ಅಂತಿಮ ದಿನಾಂಕ ನಿಗದಿಪಡಿಸಲಾಗಿತ್ತು. ಈಗ ಅದನ್ನು ಸುಮಾರು 20 ದಿನಗಳು ವಿಸ್ತರಿಸಲಾಗಿದೆ.
ತಿಂಗಳಿಂದ ಸಮಸ್ಯೆ
ಇದಕ್ಕೆ ಮೂಲಕಾರಣ ಕಳೆದೊಂದು ತಿಂಗಳಿಂದ ಸರ್ವರ್ ಡೌನ್ ಆಗಿದ್ದರಿಂದ ಇ-ಕೆವೈಸಿ ಪ್ರಕ್ರಿಯೆ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಜನ ಪರದಾಡುತ್ತಿದ್ದಾರೆ.
ಪಡಿತರ ಪಡೆಯಲು ಹೋದವರು ಇಡೀ ದಿನ ಕೆಲಸ ಬಿಟ್ಟು ಕೆವೈಸಿ ಮಾಡಿಸಲು ಸರದಿಯಲ್ಲಿ ನಿಲ್ಲುವಂತಾಗಿದೆ. ಇದರ ವಿರುದ್ಧ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕಾರಣದಿಂದ ಅವಧಿ ವಿಸ್ತರಿಸಲಾಗಿದೆ.


