ಮಂಗಳೂರು: ಇದೇ ಮೊದಲ ಬಾರಿಗೆ ಕರಾವಳಿ ನಗರ ಮಂಗಳೂರಿನಲ್ಲಿ ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆಗೆ ಮಂಗಳೂರು ನಗರ ಸಕಲ ಸಜ್ಜಾಗಿದೆ.
ಮಂಗಳೂರಿನ ಪಡೀಲ್ ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದ ಎರಡನೇ ಮಹಡಿಯಲ್ಲಿ ಸಂಪುಟ ಸಭೆ ನಡೆಯಲಿದೆ.
ಸಂಪುಟ ಸಭೆಗಾಗಿ ಪ್ರತ್ಯೇಕ ಹವಾನಿಯಂತ್ರಿತ ಮಿನಿ ಹಾಲ್ ಸಿದ್ಧಪಡಿಸಲಾಗಿದೆ. ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸಚಿವರು ಕುಳಿತುಕೊಳ್ಳಲು ಅನುವಾಗುವಂತೆ ಆಸನಗಳು, ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಸಂಪುಟ ಸಭೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರುವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಕುರಿತಂತೆ ಸಿಎಂ ಹಾಗೂ ಸಚಿವರು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಸಂಪುಟ ಸಭೆಯಲ್ಲಿ ಪ್ರಮುಖವಾಗಿ ತುಳು ಭಾಷೆಗೆ ಎರಡನೇ ಹೆಚ್ಚುವರಿ ರಾಜ್ಯ ಭಾಷೆ ಸ್ಥಾನಮಾನ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಾವಣೆ ಮಾಡುವ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು CRZ ನಿಯಮ ಸಡಿಲಿಕೆ ಘೋಷಣೆ ಮಾಡುವ ಸಾಧ್ಯತೆ ಇದೆ.


