ಬೆಳಗಾವಿ: ಆಸರೆಯಿಲ್ಲದೆ ಸರ್ಕಾರಿ ದತ್ತು ಕೇಂದ್ರ ಸೇರಿದ್ದ 2 ತಿಂಗಳ ಗಂಡು ಶಿಶುವಿಗೆ ಜಿಲ್ಲಾಧಿಕಾರಿ ಯತೀನ್ ಎಂದು ಹೆಸರಿಟ್ಟು ಹೊಸ ಬದುಕಿಗೆ ನಾಂದಿ ಹಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ನಡೆಯುತ್ತಿರುವ ಸರ್ಕಾರಿ ವಿಶೇಷ ದತ್ತು ಕೇಂದ್ರಕ್ಕೆ ಒಪ್ಪಿಸಲಾಗಿದ್ದ ಶಿಶುವಿನ ನಾಮಕರಣ ಶಾಸ್ತ್ರ ಶುಕ್ರವಾರ ಜರುಗಿತು. ಜಿಲ್ಲಾಧಿಕಾರಿಗಳು ಶಾಸ್ತ್ರೋಕ್ತವಾಗಿ ಮಗುವಿಗೆ ಯತೀನ್ ಎಂದು ನಾಮಕರಣ ಮಾಡಿ, ಆಶೀರ್ವದಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಹೆಸರಿನ ಅರ್ಥ ಮತ್ತು ಮಗುವಿನ ಭವಿಷ್ಯದ ಕುರಿತು ಆಶಯ ವ್ಯಕ್ತಪಡಿಸಿದರು.
ಯತೀನ್ ಎಂದರೆ ಅನಾಥರಿಗೆ ಆಶ್ರಯ ನೀಡುವವನು. ಈ ಮಗು ದೊಡ್ಡವನಾಗಿ ಸಮಾಜಕ್ಕೆ ಒಳ್ಳೆಯ ಹೆಸರು ತರಲಿ ಎಂದು ಹಾರೈಸಿದರು. ಅನಾಥ ಮಕ್ಕಳ ರಕ್ಷಣೆ, ದತ್ತು ಪ್ರಕ್ರಿಯೆ ಬಗ್ಗೆ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳನ್ನು ಶ್ಲಾಘಿಸಿದರು.

