ಬೆಂಗಳೂರು: ರಾಜಧಾನಿಯ ಗ್ರಾಹಕರಿಗೆ ನಂದಿನಿ ಹಾಲಿನ ಬೆಲೆ ಏರಿಕೆಯ ಬಿಸಿಯ ಬೆನ್ನಲ್ಲೇ ಕೆಎಂಎಫ್ (KMF) ಮತ್ತೊಂದು ಶಾಕ್ ನೀಡಿದೆ.
ಹಾಲಿನ ದರ ಹೆಚ್ಚಳದ ಜೊತೆಗೆ ಇದೀಗ ನಂದಿನಿ ಮೊಸರಿನ ಬೆಲೆಯನ್ನು ಸಹ ಗಣನೀಯವಾಗಿ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ನಾಳೆಯಿಂದಲೇ ಜಾರಿಗೆ ಬರಲಿವೆ.
ಕೆಎಂಎಫ್ ನಿರ್ಧಾರದಂತೆ ಲೀಟರ್ ಹಾಲಿನ ಬೆಲೆಯಲ್ಲಿ 8 ರೂಪಾಯಿ ಏರಿಕೆ ಮಾಡಲಾಗಿದ್ದು, ದಿನನಿತ್ಯದ ಅಗತ್ಯ ವಸ್ತುವಾದ ಹಾಲು ಮತ್ತು ಮೊಸರಿನ ದರ ಏರಿಕೆಯಿಂದಾಗಿ ಸಾರ್ವಜನಿಕರು ಹಾಗೂ ಗೃಹಿಣಿಯರ ಜೇಬಿಗೆ ದೊಡ್ಡ ಕತ್ತರಿ ಬೀಳುವುದು ಖಚಿತವಾಗಿದೆ.
ಮೊಸರಿನ ದರದಲ್ಲೂ ಭಾರಿ ಪ್ರಮಾಣದ ಹೆಚ್ಚಳ ಕಂಡುಬಂದಿದ್ದು, 1 ಕೆಜಿ ನಂದಿನಿ ಮೊಸರಿನ ಬೆಲೆ ಪ್ರಸ್ತುತ ರೂ. 54 ರಿಂದ ನೇರವಾಗಿ ರೂ. 68 ಕ್ಕೆ ಏರಿಕೆಯಾಗಿದೆ. ಅಂದರೆ ಒಂದು ಕೆಜಿ ಮೊಸರಿನ ಮೇಲೆಯೇ ಬರೋಬ್ಬರಿ 14 ರೂಪಾಯಿ ಹೆಚ್ಚಳ ಮಾಡಿದಂತಾಗಿದೆ.
ಅದೇ ರೀತಿ 500 ಗ್ರಾಂ ಮೊಸರಿನ ಪ್ಯಾಕೆಟ್ ಬೆಲೆ ರೂ. 28 ರಿಂದ ರೂ. 34 ಕ್ಕೆ ಹೆಚ್ಚಳವಾಗಿದ್ದು, ಅರ್ಧ ಕೆಜಿ ಪ್ಯಾಕೆಟ್ ಮೇಲೆಯೂ ರೂ. 6 ಹೆಚ್ಚುವರಿ ಹೊರೆ ಬಿದ್ದಿದೆ. ಬೆಲೆ ಏರಿಕೆಯ ಈ ಸರಣಿ ತೀರ್ಮಾನದಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.


