ಕಲಬುರಗಿ: ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಜೂನ್ ೩ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನೂತನ ಸಿಎಂ ಜೊತೆಗೆ ಕೆಲ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸ ಸಚಿವ ಸಂಪುಟ, ಡಿಸಿಎಂ ಆಯ್ಕೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಸದ್ಯಕ್ಕೆ ಮೊದಲ ಹಂತದಲ್ಲಿ ಸಚಿವರ ಪ್ರಮಾಣವಚನ ನಡೆಯಲಿದ್ದು, ಅದಾದ 15 ದಿನ ಅಥವಾ ಒಂದು ತಿಂಗಳ ನಂತರ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಜೊತೆ ಎಷ್ಟು ಜನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಬಗ್ಗೆ ನಿರ್ಧಾರವಾಗಿಲ್ಲ. ಡಿಸಿಎಂ ಹುದ್ದೆ ಬಗ್ಗೆಯೂ ಯಾವುದೇ ಪ್ರಸ್ತಾಪ ಇನ್ನೂ ಬಂದಿಲ್ಲ. ಪ್ರಸ್ತಾಪ ಬಂದ ಬಳಿಕವೇ ಡಿಸಿಎಂ ಹಾಗೂ ಸಚಿವರ ಸಂಖ್ಯೆ ತೀರ್ಮಾನವಾಗಲಿದೆ. ಜೂನ್ 3ರ ನಂತರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಇನ್ನು ಡಿ.ಕೆ.ಶಿವಕುಮಾರ್ ಸಿಎಂ ಆದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸಹಜ. ಜನ ಬೆಂಬಲ ಇರುವ ಸೂಕ್ತ ವ್ಯಕ್ತಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುತ್ತೇವೆ. ಸಿಎಂಗೆ ಉತ್ತಮ ಸಮನ್ವಯ ಇರಬೇಕು, ಅಂತವರನ್ನು ಆಯ್ಕೆ ಮಾಡ್ತೇವೆ ಎಂದಿದ್ದಾರೆ.
ವಿಧಾನಸಭಾ ಚುನಾವಣೆಗೆ ಕೇವಲ 24 ತಿಂಗಳು ಮಾತ್ರ ಬಾಕಿಯಿರುವ ಕಾರಣ ಎಲೆಕ್ಷನ್ ಮತ್ತು ಪಕ್ಷ ಕಟ್ಟುವ ದೃಷ್ಟಿಯಿಂದ ಆಯ್ಕೆ ಮಾಡಬೇಕಾಗುತ್ತೆ.
ಸ್ಪೀಡ್ ಆಗಿ, ಕಲೆಕ್ಟಿವ್ ಆಗಿ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾವು ಹುಡುಕಬೇಕಿದೆ.
ಜೊತೆಗೆ ಅವರಿಗೆ ಕೋ-ಆಪರೇಟ್ ಮಾಡುವ ಜನರೂ ಇರಬೇಕಾಗುತ್ತದೆ. ಇವೆಲ್ಲವನ್ನೂ ವಿಚಾರ ಮಾಡಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.

