ಬೆಂಗಳೂರು: ಸ್ಯಾಂಡಲ್‌ವುಡ್ ನಟಿ, ಮೋಹಕ ತಾರೆ ರಮ್ಯಾ (Ramya Divya Spandana) ಸಿನಿಮಾರಂಗದಲ್ಲಿ ಸದ್ಯಕ್ಕೆ ಸಕ್ರಿಯರಾಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ.
ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ರೂ, ರಮ್ಯಾ ಚಿತ್ರರಂಗದ ಆಪ್ತರ ಜತೆ ಈಗಲೂ ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾರೆ.
ರಮ್ಯಾ ಅವರಿಗೆ ಅಪಾರ ಅಭಿಮಾನಿಗಳ ಬಳಗವಿದೆ. ಆ ಅಭಿಮಾನಿಗಳಲ್ಲಿ ಒಂದು ಪ್ರಶ್ನೆಯಂತೂ ಯಾವಾಗಲೂ ಕಾಡುತ್ತಿರುತ್ತದೆ. ತನ್ನ ನೆಚ್ಚಿನ ನಟಿ ಯಾವಾಗ ಮದುವೆ ಆಗುತ್ತಾರೆ ಎನ್ನುವುದು.
43ರ ಹರೆಯದ ನಟಿಗೆ ಇತ್ತೀಚೆಗೆ ಮದುವೆ ಕುರಿತಾದ ಪ್ರಶ್ನೆಯೊಂದು ಎದುರಾಗಿದ್ದು, ಈ ಕುರಿತು ʼಆಕಾಶ್ʼ ನಟಿ ಉತ್ತರಿಸಿರುವುದು ವೈರಲ್ ಆಗಿದೆ.
ಪತ್ರಕರ್ತೆ ನಬಿಲಾ ಜಮಾಲ್ ಅವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು, ಆ ಮೂಲಕ ಮದುವೆ ಬಗ್ಗೆ ತನಗಿರುವ ನಿಲುವುವೇನು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ʼಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತ ಇಲ್ಲ. ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗಲ್ಲ. ಮದುವೆ ಇಲ್ಲದೆ ನಾವು ಖುಷಿಯಾಗಿದ್ದೇವೆ ಅಲ್ಲವಾ? ಅಷ್ಟೇ ಖುಷಿಯಾಗಿ ಇರುವುದೇ ಎಲ್ಲಕ್ಕಿಂತ ಮುಖ್ಯ. ಒಂದೋ, ನೀವು ಮದುವೆ ಆಗಿರಬೇಕು ಅಥವಾ ಖುಷಿಯಾಗಿರಬೇಕು ಅಂತ ಹೇಳಲಾಗುತ್ತದೆ. ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ' ಎಂದು ರಮ್ಯಾ ಹೇಳಿದ್ದಾರೆ.


