ಉಡುಪಿ : ಶಾಲೆಗಳಲ್ಲಿ ಹಿಜಾಬ್ ಗೆ ರಾಜ್ಯ ಸರ್ಕಾರ ಅವಕಾಶ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಿಕ್ಷಣದಲ್ಲಿ ರಾಜಕಾರಣ ಯಾವತ್ತೂ ಮಾಡಬಾರದು ಎಂದಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಿಕ್ಷಣದಲ್ಲಿ ರಾಜಕಾರಣ ಯಾವತ್ತೂ ಮಾಡಬಾರದು.
ಮಕ್ಕಳು ಮುಗ್ಧರಿದ್ದಾರೆ, ಪಾಲಕರು ಕಲಿಯುವುದಕ್ಕೆಂದು ಶಾಲೆಗೆ ಕಳಿಸುತ್ತಾರೆ. ಈ ವಿಚಾರದಲ್ಲಿ ಹೆಚ್ಚು ಚರ್ಚೆ ಮಾಡದೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ವಾತಾವರಣ ಸೃಷ್ಟಿ ಮಾಡಬೇಕೆಂದು ಮಾತ್ರ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ಹಿಜಾಬ್ ಅಥವಾ ಇನ್ನಾವುದೇ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಮಕ್ಕಳ ಭವಿಷ್ಯ ತಲೆಯಲ್ಲಿಟ್ಟು ರಾಜಕಾರಣ ಮಾಡಬೇಕು ಅಂತ ಹೇಳುತ್ತೇನೆ ಎಂದರು.
ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಎಲ್ಲವೂ ಪಕ್ಷದ ಹೈಕಮಾಂಡ್ ತೀರ್ಮಾನ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ನಾವೇನೂ ಪ್ರತಿಕ್ರಿಯೆ ನೀಡಲ್ಲ ಎಂದರು.
ಇಂಧನ ಮಿತವ್ಯಯ, ಚಿನ್ನಾಭರಣ ಖರೀದಿಸದಂತೆ ಹಾಗೂ ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ವಿಚಾರವಾಗಿ ಜನರಿಗೆ ಹೇಳೋದಾಯ್ತು, ಇವರೇನು ಮಾಡಿದ್ದಾರೆ ಅದನ್ನು ಮೊದಲು ಹೇಳಲಿ ಎಂದರು.
ಮೋದಿಯವರು ಗಂಟೆ ಬಾರಿಸಬೇಕು ಅಂದ್ರೆ ನಾವು ಗಂಟೆ ಬಾರಿಸುತ್ತೇವೆ. ಚಪ್ಪಾಳೆ ಹೊಡೀರಿ ಅಂದ್ರೆ ಹೊಡೀತೇವೆ. ಪೆಟ್ರೋಲ್ ಡೀಸೆಲ್ ಜಾಸ್ತಿ ಬಳಸಬೇಡಿ ಅಂದ್ರೆ ನಾವು ಪಾಲಿಸುತ್ತೇವೆ. ಬಂಗಾರ ಖರೀದಿಸಬೇಡಿ ಎಂದರೆ ಬಿಡುತ್ತೇವೆ.
ದೇಶಕ್ಕಾಗಿ ಇತಿ ಮಿತಿಯನ್ನು ಪಾಲಿಸೋಣ. ಆದರೆ ಇಂತಹ ಪರಿಸ್ಥಿತಿ ಆಗೋದಕ್ಕೆ ಕಾರಣ ಯಾರು? ಅದು ಮಾಡಿ ಇದು ಮಾಡಿ ಅನ್ನೋದೇ ಆಯ್ತು. ಆದರೆ ಇವರೇನು ಮಾಡ್ತಿದಾರೆ, ಮುಂಜಾಗ್ರತಾ ಕ್ರಮವಾಗಿ ಏನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎನ್ನೋದು ಬೇಕಲ್ವಾ ಎಂದು ಪ್ರಶ್ನಿಸಿದರು.
ಚುನಾವಣೆ ಮುಗಿದ ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಇದು ಕಂಪ್ಲೀಟ್ ರಾಜಕಾರಣ. ಈಗೇನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿಲ್ಲ. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಕಚ್ಚಾ ತೈಲ ಬೆಲೆ ಎಷ್ಟು ಏರಿತ್ತು ಗೊತ್ತಿದೆ. ಆದ್ರೂ ಜನರಿಗೆ ಬರೆ ಹಾಕುವ ಕೆಲಸ ಮಾಡಿಲ್ಲ. ಈಗ ದಿಢೀರ್ ಆಗಿ 3 ರೂಪಾಯಿ ಬೆಲೆ ಏರಿಸಿ ಜನರ ಮೇಲೆ ಹೊರೆ ಹಾಕಿದ್ದಾರೆ ಎಂದು ಹೇಳಿದರು.

