ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಬುಧವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.
ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿದ ಬಳಿಕ ಮೊದಲ ಬಾರಿಗೆ ದೆಹಲಿಗೆ ತೆರಳುತ್ತಿರುವ ಅವರು, ಬುಧವಾರ ಎಐಸಿಸಿ ಕಚೇರಿ, ಎನ್‌ಎಸ್‌ಯುಐ, ರಾಷ್ಟ್ರೀಯ ಯುವ ಕಾಂಗ್ರೆಸ್ ಕಚೇರಿ ಹಾಗೂ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಲಿದ್ದಾರೆ.
ಬಳಿಕ ಸಂಜೆ ಕರ್ನಾಟಕ ಭವನದಲ್ಲಿ ಐಎಎಎಸ್ ಅಧಿಕಾರಿಗಳೊಂದಿಗೆ ಡಿನ್ನರ್ ಸಭೆ ನಡೆಸಲಿದ್ದಾರೆ. ಈ ವೇಳೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಸಹ ಜತೆಯಾಗಲಿದ್ದಾರೆ.
ಇನ್ನು ಗುರುವಾರ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಬೆಂಗಳೂರಿಗೆ ವಾಪಸಾಗಲಿದ್ದು, ಒಟ್ಟು ಎರಡು ದಿನ ದೆಹಲಿಯಲ್ಲೇ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ ಎಂದು ತಿಳಿದುಬಂದಿದೆ.

