ಬೆಂಗಳೂರು: ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರ ಧ್ವನಿಯದ್ದು ಎನ್ನಲಾದ ಆಡಿಯೋ ಕ್ಲಿಪ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕುಶಾಲ್ ಹರುವೇಗೌಡ ಅವರು ಈ ದೂರು ದಾಖಲಿಸಿದ್ದಾರೆ.
ದೂರಿಗೆ ಕಾರಣವಾದ ಆಡಿಯೋದಲ್ಲೇನಿದೆ?
ವೈರಲ್ ಆಗಿರುವ ಆಡಿಯೋ ಕ್ಲಿಪ್‌ನಲ್ಲಿ ಮಾತನಾಡಿರುವ ವ್ಯಕ್ತಿಯು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಘಟನೆಯ ಕುರಿತು ಅತ್ಯಂತ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, ಸಂಘವನ್ನು ಪ್ರಶ್ನಿಸುವವರ ವಿರುದ್ಧ ಗಂಭೀರ ಪರಿಣಾಮಗಳು ಉಂಟಾಗಬಹುದು ಎಂಬ ಅರ್ಥ ಬರುವಂತಹ ಹೇಳಿಕೆಗಳನ್ನು ನೀಡಲಾಗಿದ್ದು, ಇದು ಸಾರ್ವಜನಿಕರಲ್ಲಿ ತೀವ್ರ ಗೊಂದಲ, ಸಂಶಯ ಹಾಗೂ ಆತಂಕ ಸೃಷ್ಟಿಸಲು ಕಾರಣವಾಗಿದೆ ಎಂದು ಕುಶಾಲ್ ಆರೋಪಿಸಿದ್ದಾರೆ.
ತನಿಖೆಗೆ ಹೆಚ್ಚಿದ ಒತ್ತಾಯ
ಪ್ರಸ್ತುತ ವೈರಲ್ ಆಗಿರುವ ಆಡಿಯೋ ನಿಜವಾಗಿಯೂ ಸಂಸದ ರಮೇಶ್ ಜಿಗಜಿಣಗಿ ಅವರದ್ದೇ ಧ್ವನಿಯೇ ಅಥವಾ ಇದನ್ನು ಯಾರಾದರೂ ಕೃತಕವಾಗಿ (AI/Deepfake) ಸೃಷ್ಟಿಸಿದ್ದಾರೆಯೇ? ಇಲ್ಲವೇ ತಿರುಚಲಾದ ಮತ್ತು ಸಂಪಾದಿಸಲಾದ (Edited) ಆಡಿಯೋನಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇಂತಹ ಸೂಕ್ಷ್ಮ ಹಾಗೂ ರಾಜಕೀಯವಾಗಿ ಗಂಭೀರವಾಗಿರುವ ವಿಷಯಗಳಲ್ಲಿ ಸತ್ಯಾಸತ್ಯತೆ ಹೊರಬರುವುದು ಅತ್ಯಗತ್ಯವಾಗಿದೆ. ಆದ್ದರಿಂದ ಪೊಲೀಸರು ತಕ್ಷಣವೇ ಈ ಆಡಿಯೋ ಕ್ಲಿಪ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ತನಿಖೆಗೆ ಒಳಪಡಿಸಬೇಕು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಶಾಲ್ ಹರುವೇಗೌಡ ಅವರು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಮನವಿ ಮಾಡಿದ್ದಾರೆ.


