ಬೆಳಗಾವಿ : ಜಮೀನಿನಲ್ಲಿ ಬೆಳೆದಿದ್ದ ಗೋವಿನಜೋಳದ ರಾಶಿಯನ್ನು ಕಾಯಲು ತೆರಳಿದ್ದ ಇಬ್ಬರು ರೈತರ ಮೇಲೆ ಸಿಡಿಲು ಬಡಿದ ಪರಿಣಾಮ ಓರ್ವ ರೈತ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ಶೋಚನೀಯ ಘಟನೆ ಯರಗಟ್ಟಿ ತಾಲೂಕಿನ ಶ್ರೀರಂಗಪುರ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದೆ.
ಮದ್ಲೂರ ಗ್ರಾಮದ ನಿವಾಸಿ ಕೇದಾರಪ್ಪ ಮಲ್ಲಪ್ಪ ಗುರ್ಲಹೊಸೂರ (47) ಸಿಡಿಲಾಘಾತದಿಂದ ಅಸುನೀಗಿದ ದುರ್ದೈವಿ. ಘಟನೆಯಲ್ಲಿ ಇವರ ಸಂಬಂಧಿ ಭೀಮಪ್ಪ ಕೇದಾರಪ್ಪ ಗುರ್ಲಹೊಸೂರ (45) ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೇದಾರಪ್ಪ ಹಾಗೂ ಭೀಮಪ್ಪ ತಮ್ಮ ಜಮೀನಿನಲ್ಲಿ ಗೋವಿನಜೋಳದ ರಾಶಿ ಮಾಡಿದ್ದರಿಂದ ರಾತ್ರಿ ಕಾವಲಿಗೆ ತೆರಳಿದ್ದರು.
ಮಧ್ಯರಾತ್ರಿ ಏಕಾಏಕಿ ಗುಡುಗು-ಸಿಡಿಲು ಸಹಿತ ಭಾರಿ ಮಳೆ ಆರಂಬಗೊಂಡಿದೆ. ಈ ವೇಳೆ ಇಬ್ಬರೂ ರಾಶಿ ಕಾಯುತ್ತಿದ್ದ ಸ್ಥಳಕ್ಕೇ ಸಿಡಿಲು ಬಡಿದಿದ್ದು, ಕೇದಾರಪ್ಪ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ತೀವ್ರವಾಗಿ ಗಾಯಗೊಂಡ ಭೀಮಪ್ಪ ಅವರನ್ನು ತಕ್ಷಣವೇ ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ ಎಂದು ಯರಗಟ್ಟಿ ಪಿಎಸ್‌ಐ ಎಲ್. ಬಿ. ಮಾಳಿ ತಿಳಿಸಿದ್ದಾರೆ.


