ಹುಬ್ಬಳ್ಳಿ : ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದು, 7ರಿಂದ 8 ಸಾವಿರ ಮತಗಳ ಮುನ್ನಡೆ ಪಡೆಯಲಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಸಂಕನೂರ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಪದವೀಧರರು, ಶಿಕ್ಷಕರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಅಭ್ಯರ್ಥಿಯ ಕಾರ್ಯವೈಖರಿಯನ್ನು ಪರಿಗಣಿಸಿ ಮತದಾರರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದರು.
ಕಬ್ಬು ಬೆಲೆ ನಿಗದಿಗೆ ತಜ್ಞರ ಸಮಿತಿ
ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದೆ. ರೈತರು, ಸಕ್ಕರೆ ಕಾರ್ಖಾನೆಗಳು, ಗ್ರಾಹಕರು ಹಾಗೂ ಸರ್ಕಾರದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಬೆಲೆ ನಿಗದಿಪಡಿಸಬೇಕಿದೆ. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸಲಾಗಿದ್ದು, 30 ದಿನಗಳಲ್ಲಿ ವರದಿ ಸಲ್ಲಿಸಲಿದೆ. ಕೃಷಿ ವೆಚ್ಚ ಹೆಚ್ಚಳಕ್ಕೆ ಅನುಗುಣವಾಗಿ ಕಬ್ಬಿನ ಬೆಲೆಯೂ ಪ್ರತಿವರ್ಷ ಹೆಚ್ಚಳವಾಗಬೇಕು ಎಂದರು.
ಕಳೆದ ವರ್ಷ ಗುರ್ಲಾಪುರದಲ್ಲಿ ರೈತರ ಹೋರಾಟದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆಯಂತೆ ವಿದ್ಯುತ್ ಖರೀದಿ ಒಪ್ಪಂದ ಸೇರಿದಂತೆ ಹಲವು ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಆರೋಪಿಸಿದರು.
ರಾಜಕೀಯ ಆಪರೇಷನ್‌ಗಳ ತನಿಖೆಯಾಗಲಿ ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳ ಕುರಿತು ಮಾತನಾಡಿದ ಅವರು, ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ನಿಷ್ಪಕ್ಷಪಾತ ತನಿಖೆಯಾಗಬೇಕು. ಸಿಬಿಐ ತನಿಖೆಯಿಂದ ಸತ್ಯಾಂಶ ಹೊರಬರಲಿ ಎಂದರು.
ಬಿಜೆಪಿಯಿಂದ ದೂರವಾಗಿರುವ ಅಸಮಾಧಾನಿತ ನಾಯಕರನ್ನು ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಈಶ್ವರಪ್ಪ, ಸೋಮಣ್ಣ ಸೇರಿದಂತೆ ನಾಯಕರನ್ನು ಮರಳಿ ಕರೆತರಬೇಕು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಚುನಾವಣಾ ಉಸ್ತುವಾರಿ ಚಂದ್ರಶೇಖರ ಪಾಟೀಲ
ರಾಜು ಕೋರ್ಯಾನುಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸುಧೀರ್ ಕುಲಕರ್ಣಿ


