ಬೆಂಗಳೂರು: ಪ್ರಸಿದ್ಧ ಹಿಮಾಲಯದ ಪುಣ್ಯಕ್ಷೇತ್ರ ಕೇದಾರನಾಥ ದೇವಾಲಯದ ಮಾಜಿ ಪ್ರಧಾನ ಅರ್ಚಕರಾದ ಶ್ರೀ ಗುರುಲಿಂಗಯ್ಯ ಅವರು ಶಿವೈಕ್ಯರಾಗಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಾಪಗಾಂವ್ ಗ್ರಾಮದವರಾದ ಗುರುಲಿಂಗಯ್ಯ ಅವರು, ದೀರ್ಘಕಾಲದವರೆಗೆ ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ್ದರು.
ಕೇದಾರನಾಥದ ಪ್ರಧಾನ ಅರ್ಚಕರಾಗಿ (ರಾವಲ್) ಸುದೀರ್ಘ ಕಾಲ ಸೇವೆ ಸಲ್ಲಿಸಿದ ಗೌರವ ಇವರಿಗಿದೆ. ತಮ್ಮ ನಿಷ್ಠಾವಂತ ಪೂಜಾವಿಧಾನ, ವೈದಿಕ ಜ್ಞಾನ ಹಾಗೂ ಧಾರ್ಮಿಕ ಪ್ರವಚನಗಳ ಮೂಲಕ ಲಕ್ಷಾಂತರ ಭಕ್ತರ ಮನದಲ್ಲಿ ನೆಲೆಸಿದ್ದರು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶಾದ್ಯಂತ ಇರುವ ಅವರ ಭಕ್ತವೃಂದ ಹಾಗೂ ಧಾರ್ಮಿಕ ಮುಖಂಡರು ತೀವ್ರ ಕಂಬನಿ ಮಿಡಿದಿದ್ದಾರೆ. ಗುರುಲಿಂಗಯ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಅವರ ಸ್ವಂತ ಊರಾದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಾಪಗಾಂವ್‌ಗೆ ರವಾನಿಸಲಾಗಿದ್ದು, ಇಂದು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಕ್ರಿಯಾ ಸಮಾಧಿ ವಿಧಿವಿಧಾನಗಳು ನೆರವೇರಲಿವೆ.
ಅವರ ಸಮಾಧಿ ಕಾರ್ಯಕ್ರಮದಲ್ಲಿ ಅನೇಕ ಮಠಾಧೀಶರು, ಧಾರ್ಮಿಕ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಲಿದ್ದಾರೆ. ಶ್ರೀಗಳ ಅಗಲಿಕೆಯಿಂದಾಗಿ ಉತ್ತರ ಕರ್ನಾಟಕ ಹಾಗೂ ಉತ್ತರಾಖಂಡದ ಧಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಶೂನ್ಯ ಆವರಿಸಿದಂತಾಗಿದೆ.


