ಬೆಂಗಳೂರು: ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ಕೆಪಿಎಸ್‌ಸಿ ಕಚೇರಿ ಮೇಲೆ ಇಂದು ಇಡೀ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಲ್ಲದೇ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಶಿವಶಂಕರಪ್ಪ ಸಾಹುಕಾರ್ ಅವರಿಗೆ ಸೇರಿದ ಮನೆ ಹಾಗೂ ವಿವಿಧ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸ ಸೇರಿದಂತೆ ಒಟ್ಟು 13 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹಲವು ದಾಖಲೆಗಳು ಹಾಗೂ ಸಂಬಂಧಿತ ಮಾಹಿತಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇಡಿ ಅಧಿಕಾರಿಗಳ ಈ ದಾಳಿ ಯಾವ ಪ್ರಕರಣಕ್ಕೆ ಸಂಬಂಧಿಸಿದೆ ಹಾಗೂ ಪರಿಶೀಲನೆ ವೇಳೆ ಯಾವ ದಾಖಲೆಗಳು ಪತ್ತೆಯಾಗಿವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.


