ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ 'ಫ್ರೀಡಂ ಹಬ್ಬ' ಆಯೋಜಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲು QR ಕೋಡ್ ಮೂಲಕ ಪ್ರೀ-ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹಾಗೂ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ನೋಂದಣಿ ಇಲ್ಲದೆ ಪ್ರವೇಶವಿಲ್ಲ
ಮಾಣಿಕ್ ಷಾ ಪರೇಡ್ ಗ್ರೌಂಡ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಗಿದ ಬಳಿಕ ಆಗಸ್ಟ್ 15ರಂದು ಮಧ್ಯಾಹ್ನ 12 ಗಂಟೆಯಿಂದ ವಿಧಾನಸೌಧದ ಬಳಿ 'ಫ್ರೀಡಂ ಹಬ್ಬ' ಆರಂಭವಾಗಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ QR ಕೋಡ್ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಪ್ರೀ-ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳದೆ ನೇರವಾಗಿ ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


