ಬೆಂಗಳೂರು : "ನಾಡಿನ ಜನರ ರಕ್ಷಣೆ ಮಾಡುವ ಪೊಲೀಸರು ಉತ್ತಮ ಬದುಕನ್ನು ನಡೆಸಬೇಕು. ಆದ ಕಾರಣ ಅವರ ಸಂಕಷ್ಟ ಭತ್ಯೆಯ ಪ್ರಮಾಣವನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ ಶೇ.50ರಷ್ಟು ಹೆಚ್ಚಳಕ್ಕೆ ಸರ್ಕಾರದ ಸಮ್ಮತಿ ಇದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಕರ್ನಾಟಕ ರಾಜ್ಯ ಪೊಲೀಸರಿಗಾಗಿ ಸಮಗ್ರ ಸಾಮರ್ಥ್ಯ ವೃದ್ದಿ ತರಬೇತಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
"ಪೊಲೀಸರ ಆರ್ಥಿಕ ಅಗತ್ಯಗಳಿಗೆ ಮೊದಲು ಪ್ರಾಶಸ್ತ್ಯ ನೀಡಲಾಗುವುದು. ಗೃಹ ಇಲಾಖೆಯು ಪೊಲೀಸರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ" ಎಂದು ಭರವಸೆ ನೀಡಿದರು.
ಎನ್ ಎಸ್ ಜಿಯಿಂದ ಶಕ್ತಿ ಪಡೆಯಿರಿ
"ನಮ್ಮನ್ನು ರಕ್ಷಿಸಲು ನಮ್ಮ ಆರಕ್ಷಕರನ್ನು ಸಜ್ಜುಗೊಳಿಸುವ ಎನ್‌ಎಸ್ ಜಿ ಗೆ ಧನ್ಯವಾದಗಳು. ಸಜ್ಜನರನ್ನು ರಕ್ಷಿಸುವುದು, ದುರ್ಜನರನ್ನು ಶಿಕ್ಷಿಸುವುದೂ ಕೂಡ ಧರ್ಮ. ನೀವೆಲ್ಲರೂ ಧರ್ಮದ ಕಾರ್ಯವನ್ನು ಬಹಳ ನಿಷ್ಠೆಯಿಂದ ಮಾಡುತ್ತಿದ್ದೀರಿ. ಸಮಾಜದಲ್ಲಿ ಅಶಾಂತಿ, ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ನೀವು ಶಿಷ್ಟರ ರಕ್ಷಣೆಗೆ ಬರುತ್ತೀರಿ. ರಾಷ್ಟ್ರೀಯ ಭದ್ರತಾ ಪಡೆ ತಮ್ಮ ಶಕ್ತಿಯನ್ನು ನಮ್ಮ ರಾಜ್ಯ ಪೊಲೀಸರಿಗೆ ಧಾರೆ ಎರೆಯುತ್ತಿದೆ.
ಎನ್ ಎಸ್‌ಜಿಯಿಂದ ಪಡೆದ ತರಬೇತಿ ಸಾರ್ಥಕವಾಗಬೇಕು. ಅದನ್ನು ನಾಡಿನ, ಜನರ ರಕ್ಷಣೆಗೆ ಬಳಸಬೇಕು. ಎನ್ ಎಸ್ ಜಿ ತರಬೇತಿ ನಮ್ಮ ಪೊಲೀಸರ ಸಾಮರ್ಥ್ಯ ಹೆಚ್ಚಿಸುತ್ತದೆ ಕೌಶಲ್ಯವಂತರನ್ನಾಗಿ ಮಾಡುತ್ತದೆ" ಎಂದರು.
"ಕರ್ನಾಟಕ ಪೊಲೀಸ್ ದೇಶದ ಹೆಮ್ಮೆ. ನಮ್ಮ ಪೊಲೀಸರು ದಕ್ಷತೆಗೆ, ಕಾರ್ಯಪರತೆಗೆ, ಕರ್ತವ್ಯ ನಿಷ್ಠೆಗೆ ಹೆಸರಾದವರು. ನಾವು ಹುಟ್ಟಿದ ಈ ಸಮಾಜಕ್ಕೆ ಋಣ ತೀರಿಸುವುದೇ ನಿಜವಾದ ಸೇವೆ. ಆ ಕೆಲಸವನ್ನು ನೀವು ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ಕಷ್ಟದ ಸಂದರ್ಭದಲ್ಲಿ ನೀವು ನಿಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿ ನಾಡನ್ನು ರಕ್ಷಣೆ ಮಾಡುತ್ತಿದ್ದೀರಿ. ನಮ್ಮ ಆರಕ್ಷಕರು, ಕಾನೂನಿನ ಪಾಲಕರು, ಕಾನೂನಿನ ರಕ್ಷಕರು" ಎಂದು ಶ್ಲಾಘಿಸಿದರು.


