ಬೆಂಗಳೂರು : ಕಳೆದ ಎರಡು ತಿಂಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ಸಚಿವ ಸಂಪುಟ ಪುನಾರಚನೆ ಕಸರತ್ತಿಗೆ ಕೊನೆಗೂ ತೆರೆಬಿದ್ದಿದೆ.
ಆಡಳಿತಾರೂಢ ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕರಿಗೆ ಬಿಗ್ ಶಾಕ್ ನೀಡಿದ್ದು, ಸಂಪುಟದಲ್ಲಿದ್ದ 14 ಘಟಾನುಘಟಿ ನಾಯಕರನ್ನು ಕೈಬಿಟ್ಟು 20 ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಿದೆ.
ಎಐಸಿಸಿ (AICC) ಸೋಮವಾರ ನೂತನ ಸಚಿವರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಹೊಸ ತಂಡಕ್ಕೆ ಚಾಲನೆ ನೀಡಿದೆ.
ಹಿರಿಯರಿಗೆ ಶಾಕ್, ಹೊಸಬರಿಗೆ ಜಾಕ್‌ಪಾಟ್:
ಸಂಪುಟ ಪುನಾರಚನೆ ವೇಳೆ ಹಿರಿಯರು ಮತ್ತು ಕಿರಿಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ವರಿಷ್ಠರು ಸಂಪೂರ್ಣ ಹೊಸ ಪಡೆಯನ್ನೇ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಕಳೆದ ಸಂಪುಟದಲ್ಲಿದ್ದ ಪ್ರಭಾವಿ ಖಾತೆಗಳನ್ನು ನಿಭಾಯಿಸುತ್ತಿದ್ದ ನಾಯಕರಿಗೆ ಈ ಬಾರಿ ಮಂತ್ರಿಗಿರಿ ಕೈತಪ್ಪಿದೆ.
ಸಚಿವ ಸ್ಥಾನ ಕಳೆದುಕೊಂಡ ಪ್ರಮುಖ ನಾಯಕರು:
ಎಚ್.ಕೆ. ಪಾಟೀಲ್
ದಿನೇಶ್ ಗುಂಡೂರಾವ್
ಡಾ. ಎಚ್.ಸಿ. ಮಹಾದೇವಪ್ಪ
ಶಿವಾನಂದ ಪಾಟೀಲ್
ಶರಣಬಸಪ್ಪ ದರ್ಶನಾಪುರ
ಎಸ್.ಎಸ್. ಮಲ್ಲಿಕಾರ್ಜುನ್
ರಹೀಂ ಖಾನ್
ಶರಣಪ್ರಕಾಶ್ ಪಾಟೀಲ್
ಆರ್.ಬಿ. ತಿಮ್ಮಾಪುರ
ಕೆ. ವೆಂಕಟೇಶ್
ಕೆ.ಎನ್. ರಾಜಣ್ಣ
ಲಕ್ಷ್ಮಿ ಹೆಬ್ಬಾಳ್ಕರ್
ಎಂ.ಸಿ. ಸುಧಾಕರ್
ಎನ್.ಎಸ್. ಬೋಸರಾಜು
ಮಾಜಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್, ದಿನೇಶ್ ಗುಂಡೂರಾವ್ ಹಾಗೂ ಕೆ.ಎನ್. ರಾಜಣ್ಣ ಅವರಂತಹ ಹಿರಿಯ ನಾಯಕರನ್ನು ಕೈಬಿಟ್ಟಿರುವುದು ಪಕ್ಷದ ಆಂತರಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೊಸ ರಕ್ತಕ್ಕೆ ಅವಕಾಶ ನೀಡುವ ಉದ್ದೇಶದಿಂದ ಹೈಕಮಾಂಡ್ ಈ ನಿರ್ಧಾರ ತಳೆದಿದೆ ಎನ್ನಲಾಗಿದ್ದು, ನೂತನ ಸಚಿವರ ಪಟ್ಟಿ ಹೊರಬಿದ್ದ ಬೆನ್ನಲ್ಲೇ ಕೈ ನಾಯಕರ ವಲಯದಲ್ಲಿ ಹೊಸ ರಾಜಕೀಯ ಸಂಚಲನ ಶುರುವಾಗಿದೆ.


