ಬೆಂಗಳೂರು : ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಶಾಸಕರು ಜಿಲ್ಲಾವಾರು ಗುಂಪುಗಳಾಗಿ ಸೇರಿ ಊಟ ಮಾಡಿದ್ದಕ್ಕೂ ನಾಯಕತ್ವ ಬದಲಾವಣೆಯ ಚರ್ಚೆಗೂ ಯಾವುದೇ ಸಂಬಂಧವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಅಧಿವೇಶನದಲ್ಲಿಯೂ ಇಂತಹ ಭೋಜನ ಕೂಟಗಳು ನಡೆಯಬಹುದು.ಆದರೆ, ಸದ್ಯಕ್ಕೆ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆಗಳು ಪ್ರಸ್ತುತವಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಇಬ್ಬರ ನಡುವೆಯೂ ಮೊದಲಿನಿಂದಲೂ ಉತ್ತಮ ಸಂಬಂಧವಿದ್ದು, ನಾವು ಕೂಡ ಸಿದ್ದರಾಮಯ್ಯ ಅವರ ಜೊತೆ ವಿಷಯಾಧರಿತವಾಗಿ ಚರ್ಚೆ ಮಾಡುತ್ತೇವೆ. ನಾವೆಲ್ಲರೂ ಒಂದೇ ಪಕ್ಷದವರಾಗಿದ್ದು, ಒಗ್ಗಟ್ಟಿನಿಂದಲೇ ಮುಂದುವರಿಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ಅಹಿಂದ ಸಂಘಟನೆಯಲ್ಲಿ ಯಾವುದೇ ಪ್ರತ್ಯೇಕ ಗುಂಪುಗಳಿಲ್ಲ. ನಾಯಕತ್ವದ ವಿಚಾರದಲ್ಲಿ ಯಾರು ಜನರ ನಡುವೆ ಇದ್ದು, ಬಿಸಿಲು-ಮಳೆಯನ್ನದೆ ಶ್ರಮಿಸುತ್ತಾರೋ, ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಾರೋ ಅವರೇ ನಾಯಕರಾಗುತ್ತಾರೆ.
ನಾಯಕತ್ವವನ್ನು ಯಾರೂ ಘೋಷಣೆ ಮಾಡುವುದು ಅಥವಾ ಪ್ರಮಾಣಪತ್ರ ನೀಡುವುದು ಸಾಧ್ಯವಿಲ್ಲ. ಜನರು ಒಪ್ಪಿಕೊಂಡಾಗ ಮಾತ್ರ ನಾಯಕತ್ವ ನಿರ್ಧಾರವಾಗುತ್ತದೆ. ನಾನು, ನೀನು ಎಂದು ಪೈಪೋಟಿ ನಡೆಸುವ ಅಗತ್ಯವಿಲ್ಲ ಎಂದು ಹೇಳಿದರು.
ಸಂಪುಟದಲ್ಲಿ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಸಚಿವ ಸ್ಥಾನ ಖಾಲಿಯಿದ್ದು, ಅದನ್ನು ಅದೇ ಸಮುದಾಯಕ್ಕೆ ನೀಡಬೇಕು. ಮತ್ತೊಂದು ಸ್ಥಾನವನ್ನು ಕುರುಬ ಸಮುದಾಯಕ್ಕೆ ಮೀಸಲಿಡಲಾಗಿದೆ.
ಈ ಎರಡು ಸ್ಥಾನಗಳಲ್ಲಿ ಒಂದನ್ನು ಮಹಿಳೆಯರಿಗೆ ನೀಡಬೇಕೆಂಬ ಅಭಿಪ್ರಾಯವೂ ಇದೆ. ಹಿರಿಯ ಶಾಸಕ ಎಂ. ಕೃಷ್ಣಪ್ಪ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ವಿಚಾರದಲ್ಲಿ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಅವರು, ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುವ ಆತಂಕವಿದೆ.
ಒಟ್ಟು 800 ಸಂಸತ್ ಸ್ಥಾನಗಳ ಪೈಕಿ ಉತ್ತರ ಭಾರತದ ರಾಜ್ಯಗಳಿಗೆ 500ಕ್ಕೂ ಹೆಚ್ಚಿನ ಸ್ಥಾನಗಳು ದೊರೆಯುತ್ತವೆ. ದಕ್ಷಿಣ ಭಾರತದ ರಾಜ್ಯಗಳ ಆದ್ಯತೆ ಕಡಿಮೆಯಾಗುವ ಸಾಧ್ಯತೆಯಿದೆ. ಇದರಿಂದ ನಮ್ಮ ರಾಜ್ಯಗಳ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಾಗಬಹುದು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ಷೇತ್ರ ಪುನರ್‌ವಿಂಗಡಣೆಯನ್ನು ವಿರೋಧಿಸಿದೆ ಎಂದು ತಿಳಿಸಿದರು. ಮಹಿಳಾ ಮೀಸಲಾತಿ ಮಸೂದೆ ಕಳೆದ ವರ್ಷವೇ ಸಂಸತ್ತಿನಲ್ಲಿ ಅವಿರೋಧವಾಗಿ ಅಂಗೀಕಾರಗೊಂಡಿದೆ.
ಆದರೆ, ವಿವಾದಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಅಂಗೀಕರಿಸಿಕೊಳ್ಳಲು ಮಹಿಳಾ ಮೀಸಲಾತಿಯ ನೆಪ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

