ತುರುವೇಕೆರೆ : 2026-27 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ (ಬೆಳೆ ವಿಮೆ) ಮತ್ತು ಬೆಳೆ ಸಮೀಕ್ಷೆ ಯೋಜನೆಯ ಪ್ರಚಾರ ಕಾರ್ಯಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಹಸಿರು ನಿಶಾನೆ ತೋರಿಸಿದರು.

ನಂತರ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಅನಿರೀಕ್ಷಿತ ಪ್ರಕೃತಿ ವಿಕೋಪ, ಕೀಟಭಾದೆ ಮತು ರೋಗಗಳಿಂದ ಬೆಳೆ ನಷ್ಟವಾದಾಗ ರೈತರಿಗೆ ಆರ್ಥಿಕ ಬೆಂಬಲವನ್ನು ನೀಡಲು ಕೇಂದ್ರ ಸರ್ಕಾರ 2016 ರಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಪ್ರಾರಂಭಿಸಿದೆ.ರೈತರು ಬೆಳೆ ವಿಮೆ ಮತು ಬೆಳೆ ಸಮೀಕ್ಷೆಗೆ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡುಸರ್ಕಾರ ಕೃಷಿ ಇಲಾಖೆ ಮೂಲಕ ನೀಡುವ ಸವಲತ್ತುಗಳನ್ನು ಪಡೆದು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕೆಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪೂಜಾ ಮಾತನಾಡಿ, ತಾಲೂಕಿನಲ್ಲಿ 2026 ನೇ ಸಾಲಿನ ಮುಂಗಾರು ಹಂಗಾಮುಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೊಳಿಸಿ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಗ್ರಾಪಂ ಮಟ್ಟದ ವಿಮಾ ಘಟಕಕ್ಕೆ ತಾಲೂಕಿನ ಭತ್ತ (ನೀರಾವರಿ), ರಾಗಿ (ಮಳೆಯಾಶ್ರಿತ) ಬೆಳೆಗಳನ್ನು, ಹೋಬಳಿ ಮಟ್ಟದ ವಿಮಾ ಘಟಕಗಳಿಗೆ ಅಲಸಂದೆ(ಮಳೆಯಾಶ್ರಿತ), ರಾಗಿ(ನೀರಾವರಿ), ಹುರಳಿ(ಮಳೆಯಾಶ್ರಿತ), ಹೆಸರು(ಮಳೆಯಾಶ್ರಿತ), ಟೊಮೊಟೋ, ಎಳ್ಳು ಬೆಳೆಗಳಿಗೆ ನೋಂದಾಯಿಸಲು ಅಧಿಸೂಚನೆ ಮಾಡಲಾಗಿದೆ. ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮೆಗೆ ನೋಂದಣಿ ಮಾಡಲು ಹೆಸರು(ಮಳೆಯಾಶ್ರಿತ) ಹಾಗೂ ಎಳ್ಳು (ಮಳೆಯಾಶ್ರಿತ) ಜೂನ್ 30, ಅಲಸಂದೆ(ಮಳೆಯಾಶ್ರಿತ) ಜುಲೈ 15, ಟೊಮೊಟಾ ಬೆಳೆಗೆ ಜುಲೈ 15, ರಾಗಿ(ನೀರಾವರಿ), ಹುರಳಿ(ಮಳೆಯಾಶ್ರಿತ) ಬೆಳೆಗೆ ನೋಂದಣಿಗೆ ಆಗಸ್ಟ್ 14 ಕೊನೆಯ ದಿನಾಂಕವಾಗಿದೆ. ರಾಗಿ(ಮಳೆಯಾಶ್ರಿತ), ಭತ್ತ(ನೀರಾವರಿ) ಬೆಳೆಗೆ ಆಗಸ್ಟ್ 14 ಕೊನೆಯ ದಿನಾಂಕವಾಗಿದ್ದು, ರೈತರು ತಮ್ಮ ವ್ಯಾಪ್ತಿಯ ಬ್ಯಾಂಕುಗಳಲ್ಲಿ ಅನುಮೋದಿತ ಸಾರ್ವಜನಿಕ ಸೇವಾ ಕೇಂದ್ರಗಳಲ್ಲೂ ಬೆಳೆ ವಿಮೆಗೆ ನೋಂದಣಿ ಮಾಡಬಹುದಾಗಿದೆ ಎಂದರು.

ತಾಲ್ಲೂಕಿನಲ್ಲಿ ಲಭ್ಯವಿರುವ 228426 ಸರ್ವೆ ನಂಬರುಗಳನ್ನು ಖಾತೆದಾರರಿಗೆ ಸೃಜಿಸಿರುವ ಎಫ್ಐಡಿಗಳಿಗೆ ಸೇರ್ಪಡೆ ಮಾಡಬೇಕಾಗಿದ್ದು, ಈ ಪೈಕಿ 150083 ತಾಕುಗಳನ್ನು ಎಫ್ಐಡಿಗೆ ಸೇರ್ಪಡೆ ಮಾಡಲಾಗಿದೆ. ಬಾಕಿ ಉಳಿದಿರುವ 78343 ತಾಕುಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಸಂಬಂಧಿಸಿದ ರೈತರ ಎಫ್ಐಡಿಗಳಿಗೆ ಸೇರ್ಪಡೆ ಮಾಡಬೇಕಿದ್ದು, ರೈತರು ಹತ್ತಿರದ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ಮಾಡಿ ಸೇರ್ಪಡೆಗೊಳಿಸಿಕೊಳ್ಳಬೇಕೆಂದು ಮನವಿ ಮಾಡಿದ ಅವರು, ಈಗಾಗಲೇ ಎಫ್ಐಡಿ ಹೊಂದಿರುವ ರೈತರಿಗೆ ಕೇಂದ್ರದಿಂದ ಅಗ್ರಿಸ್ಟ್ರಾಕ್ ಯೋಜನೆಯಡಿ ಒಂದೇ ಮಾದರಿಯ ಐಡಿಯನ್ನು (ಕೇಂದ್ರ ಐಡಿ) ಸೃಜಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಇದರ ಪ್ರಕಾರ ತಾಲೂಕಿನಲ್ಲಿ ಕೇಂದ್ರ ಐಡಿ ಸೃಜಿಸಲು ಬಾಕಿ ಉಳಿದಿರುವ 4439 ಕೇಂದ್ರ ಐಡಿ ಸೃಜಿಸಲು ಕ್ರಮವಹಿಸಲಾಗಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಪಡೆಯಲು ಹಾಗೂ ನೇರ ನಗದು ವರ್ಗಾವಣೆ ಮಾದರಿಯಲ್ಲಿ ಸಹಾಯಧನ ಪಾವತಿಸಲು ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬೆಳೆ ವಿಮೆ, ಬೆಳೆ ಸಮೀಕ್ಷೆ, ಮೊಬೈಲ್ ಮೂಲಕ ರಸಗೋಬ್ಬರ ಖರೀದಿ, ಪರ್ಯಾಯ ಬೆಳೆ ಪದ್ಧತಿ, ಫ್ರೂಟ್ಸ್ ತಂತ್ರಾಂಶದಲ್ಲಿ ಸರ್ವೆ ನಂಬರ್ ಸೇರ್ಪಡಿಸಿ ಇ-ಕೆವೈಸಿ ಮಾಡಿಸುವ ಬಗ್ಗೆ ರೈತರಿಗೆ ಅರಿವು ಮೂಡಿಸುವ ಪ್ರಚಾರ ಕರ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಕೃಷಿ ಇಲಾಖೆ ಅಧಿಕಾರಿಗಳಾದ ಗಿರೀಶ್, ಮನೋಹರ್, ರಂಜಿತ್ ಸೇರಿದಂತೆ ನಾಗರೀಕರು, ರೈತರು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್


