ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ನವೆಂಬರ್ 16 ರಿಂದ 17 ರವರೆಗೆ ಫಿಲಿಪೈನ್ಸ್‌ನ (Philippines) ಮನಿಲಾಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ತಿಳಿಸಿದೆ.
ಈ ಪ್ರವಾಸದ ವೇಳೆ ಪ್ರಧಾನಿಯವರು ನವೆಂಬರ್ 17 ರಂದು ನಡೆಯಲಿರುವ 23 ನೇ ಆಸಿಯಾನ್-ಭಾರತ ಶೃಂಗಸಭೆ ಹಾಗೂ 21 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ (ಇಎಎಸ್) ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ 2026 ರ ಸಾಲಿಗೆ ಆಸಿಯಾನ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಫಿಲಿಪೈನ್ಸ್ ಈ ಮಹತ್ವದ ಸಭೆಗಳ ಆತಿಥ್ಯವನ್ನು ವಹಿಸುತ್ತಿದೆ.
ಭಾರತ ಮತ್ತು ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ನಡುವಿನ ಸಂಬಂಧವು ಭಾರತದ 'ಆಕ್ಟ್ ಈಸ್ಟ್' ನೀತಿ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಸಮಗ್ರ ದೃಷ್ಟಿಕೋನದ ಅತ್ಯಂತ ಪ್ರಮುಖ ಆಧಾರಸ್ತಂಭವಾಗಿದೆ. ಪ್ರಸ್ತುತ 2026 ನೇ ವರ್ಷವನ್ನು ಭಾರತ ಮತ್ತು ಆಸಿಯಾನ್ ದೇಶಗಳು 'ಆಸಿಯಾನ್-ಭಾರತ ಸಮುದ್ರ ಸಹಕಾರ ವರ್ಷ'ವಾಗಿ ಆಚರಿಸುತ್ತಿವೆ.
ಇದರೊಂದಿಗೆ, ಮುಂಬರುವ 2027 ರಲ್ಲಿ ಉಭಯ ಪಕ್ಷಗಳ ನಡುವಿನ ರಾಜತಾಂತ್ರಿಕ ಸಂವಾದ ಸಂಬಂಧಕ್ಕೆ 35 ವರ್ಷಗಳು ಹಾಗೂ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಐದು ವರ್ಷಗಳು ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಈ ಉನ್ನತ ಮಟ್ಟದ ಭೇಟಿ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.


