ಟೆಲ್ ಅವೀವ್: ಇಸ್ರೇಲ್ ಮೇಲೆ 2023ರ ಅಕ್ಟೋಬರ್ 7ರಂದು ನಡೆದ ದಾಳಿಯ ಸಂಚು ರೂಪಿಸಿ, ಅದನ್ನು ಮೇಲ್ವಿಚಾರಣೆ ಮಾಡಿದ್ದ ಹಮಾಸ್‌ನ ಹಿರಿಯ ಕಮಾಂಡರ್ ಸಮೀರ್ ಅಬು ಯೂನಿಸ್‌ನನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ. ಗಾಜಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಯೂನಿಸ್ ಮೃತಪಟ್ಟಿರುವುದನ್ನು ಹಮಾಸ್‌ನ ಸಶಸ್ತ್ರ ವಿಭಾಗ ಅಲ್-ಖಸ್ಸಾಮ್ ಬ್ರಿಗೇಡ್ ಕೂಡ ದೃಢಪಡಿಸಿದೆ.
ಇಸ್ರೇಲ್ ಸೇನೆ ಮತ್ತು ಆಂತರಿಕ ಭದ್ರತಾ ಸಂಸ್ಥೆ ಶಿನ್ ಬೆಟ್ ರವಿವಾರ ಮುಂಜಾನೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಹಮಾಸ್‌ನ ಮಿಲಿಟರಿ ವಿಭಾಗದ ಪ್ರಮುಖ ಉಗ್ರನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿಸಿವೆ. ದಾಳಿಯ ಕುರಿತು ಹೆಚ್ಚಿನ ವಿವರಗಳನ್ನು ಬಳಿಕ ನೀಡುವುದಾಗಿ ಹೇಳಿವೆ.
ಶನಿವಾರ ಸಂಜೆ ನಡೆದ ದಾಳಿಯಲ್ಲಿ ಯೂನಿಸ್ ಹತ್ಯೆಯಾಗಿದ್ದಾನೆ ಎಂದು ಅಲ್-ಖಸ್ಸಾಮ್ ಬ್ರಿಗೇಡ್ ಟೆಲಿಗ್ರಾಂನಲ್ಲಿ ಪ್ರಕಟಿಸಿದೆ.
ಅಕ್ಟೋಬರ್ 7ರ ದಾಳಿಯ ಯೋಜನೆ ರೂಪಿಸುವಲ್ಲಿ ಮತ್ತು ಅದನ್ನು ಕಾರ್ಯಗತಗೊಳಿಸುವ ಮೇಲ್ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಮಾಂಡರ್‌ಗಳಲ್ಲಿ ಯೂನಿಸ್ ಕೂಡ ಒಬ್ಬನಾಗಿದ್ದ ಎಂದು ತಿಳಿಸಿದೆ.
ಎಎಫ್‌ಪಿ ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ಭದ್ರತಾ ಮೂಲವೊಂದು, ಅಲ್-ಖಸ್ಸಾಮ್‌ನ ರಫಾ ಬ್ರಿಗೇಡ್ ಕಮಾಂಡರ್ ಆಗಿದ್ದ ಯೂನಿಸ್‌ನನ್ನು ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದ ಪಶ್ಚಿಮ ಭಾಗದಲ್ಲಿರುವ ಅಲ್-ಮವಾಸಿ ಪ್ರದೇಶದಲ್ಲಿ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
ಗಾಜಾದ ನಾಗರಿಕ ರಕ್ಷಣಾ ವಿಭಾಗದ ವಕ್ತಾರ ಮಹಮೂದ್ ಬಸಲ್ ಕೂಡ ಯೂನಿಸ್‌ನ ಮೃತದೇಹವನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. 53 ವರ್ಷದ ಯೂನಿಸ್ ಹತ್ಯೆಯಾದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕದನ ವಿರಾಮ ಉಲ್ಲಂಘನೆ ಆರೋಪ
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಳಿಕ ಎರಡು ವರ್ಷಗಳ ಕಾಲ ನಡೆದ ಯುದ್ಧಕ್ಕೆ 2025ರ ಅಕ್ಟೋಬರ್‌ನಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮದ ಮೂಲಕ ತಾತ್ಕಾಲಿಕ ತೆರೆ ಬಿದ್ದಿತ್ತು. ಆದರೆ, ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುತ್ತಿರುವುದಾಗಿ ಇಸ್ರೇಲ್ ಮತ್ತು ಹಮಾಸ್ ಪರಸ್ಪರ ಆರೋಪಿಸುತ್ತಿವೆ.
ಕದನ ವಿರಾಮದ ಬಳಿಕ ಸಂಘರ್ಷದ ತೀವ್ರತೆ ಬಹುತೇಕ ಕಡಿಮೆಯಾಗಿದ್ದರೂ, ಇಸ್ರೇಲ್ ಗಾಜಾ ಪ್ರದೇಶದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದೆ.
ಕದನ ವಿರಾಮ ಜಾರಿಯಾದ ಬಳಿಕ ಗಾಜಾದಲ್ಲಿ 1,600ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಎಂದು ಹಮಾಸ್ ಆಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುವ ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಅಂಕಿಅಂಶಗಳನ್ನು ವಿಶ್ವಸಂಸ್ಥೆ ವಿಶ್ವಾಸಾರ್ಹವೆಂದು ಪರಿಗಣಿಸಿದೆ.
ಇದೇ ಅವಧಿಯಲ್ಲಿ ಇಸ್ರೇಲ್ ಸೇನೆಯ ಏಳು ಯೋಧರು ಮತ್ತು ಓರ್ವ ನಾಗರಿಕ ಗುತ್ತಿಗೆದಾರ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ಮಾಹಿತಿ ನೀಡಿದೆ.
ಇನ್ನೊಂದೆಡೆ, ಇಸ್ರೇಲ್‌ನ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ಆಡಳಿತ ಮೈತ್ರಿಕೂಟ ರಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದ್ದಾರೆ.
ಅವರ ರಾಜಕೀಯ ಪ್ರತಿಸ್ಪರ್ಧಿ ಹಾಗೂ ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸದ್ಯವೂ ದೇಶದ ಸೇನಾ ಕಾರ್ಯಾಚರಣೆಗಳ ಜವಾಬ್ದಾರಿ ಹೊಂದಿದ್ದಾರೆ.
2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರ ಸಂಘಟನೆ ಇಸ್ರೇಲ್ ಮೇಲೆ ಭಾರೀ ಪ್ರಮಾಣದ ಸಂಘಟಿತ ದಾಳಿ ನಡೆಸಿತ್ತು. ಗಾಜಾ ಪಟ್ಟಿಯಿಂದ ಸಾವಿರಾರು ರಾಕೆಟ್‌ಗಳನ್ನು ಉಡಾಯಿಸುವುದರ ಜತೆಗೆ, ಹಮಾಸ್ ಉಗ್ರರು ಇಸ್ರೇಲ್ ಗಡಿಯ ಬೇಲಿಯನ್ನು ಭೇದಿಸಿ ಭೂಮಾರ್ಗ, ಸಮುದ್ರ ಮತ್ತು ವಾಯುಮಾರ್ಗಗಳ ಮೂಲಕ ದೇಶದೊಳಗೆ ನುಗ್ಗಿದ್ದರು.
ದಕ್ಷಿಣ ಇಸ್ರೇಲ್‌ನ ಹಲವು ಪಟ್ಟಣಗಳು, ಸೇನಾ ನೆಲೆಗಳು ಮತ್ತು ಸಂಗೀತ ಕಾರ್ಯಕ್ರಮವೊಂದನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ, ಸುಮಾರು 1,200 ಮಂದಿಯನ್ನು ಹತ್ಯೆ ಮಾಡಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿಯನ್ನು ಒತ್ತೆಯಾಳುಗಳಾಗಿ ಸೆರೆಹಿಡಿದು ಗಾಜಾಕ್ಕೆ ಎಳೆದೊಯ್ಯಲಾಗಿತ್ತು.
ಈ ದಾಳಿಯ ಬಳಿಕ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧ ಘೋಷಿಸಿ ಗಾಜಾ ಪಟ್ಟಿಯ ಮೇಲೆ ವ್ಯಾಪಕ ಸೇನಾ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ತೀವ್ರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಯಿತು.


