ಬೆಂಗಳೂರು: ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ 'ರಾಮಾಯಣ Part -1' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ನವೆಂಬರ್ 5ರಂದು ತೆರೆಕಂಡ ಈ ಬಿಗ್ ಬಜೆಟ್ ಚಿತ್ರ, ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ₹685. 60 ಕೋಟಿ ನಿವ್ವಳ (Net) ಗಳಿಕೆ ಮಾಡುವ ಮೂಲಕ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಾಲಿಗೆ ಸೇರಿದೆ.
ಇನ್ನು ವಿಶ್ವಾದ್ಯಂತ ಚಿತ್ರದ ಒಟ್ಟು ಕಲೆಕ್ಷನ್ ಬರೋಬ್ಬರಿ ₹1,228 ಕೋಟಿ ತಲುಪಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.
ಚಿತ್ರಮಂದಿರಗಳಲ್ಲಿ ಮೊದಲ ದಿನದಿಂದಲೇ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ರಾಮಾಯಣ', ಓಪನಿಂಗ್ ದಿನವೇ ₹64.85 ಕೋಟಿ ಗಳಿಸಿತ್ತು. ಬಿಡುಗಡೆಯಾದ 5ನೇ ದಿನದಂದು ₹107.50 ಕೋಟಿ ಕಲೆಕ್ಷನ್ ಮಾಡುವ ಮೂಲಕ ತನ್ನ ಇದುವರೆಗಿನ ಅತಿಹೆಚ್ಚು ಏಕದಿನ ಗಳಿಕೆಯನ್ನು ದಾಖಲಿಸಿದೆ.
ಎರಡನೇ ಶುಕ್ರವಾರದಂದು (9ನೇ ದಿನ) ₹48.10 ಕೋಟಿ ಗಳಿಸಿ ಕೊಂಚ ಇಳಿಕೆ ಕಂಡಿದ್ದರೂ, ವಾರಾಂತ್ಯವಾದ ಶನಿವಾರ (10ನೇ ದಿನ) ಮತ್ತೆ ಪುಟಿದೆದ್ದು ₹72.90 ಕೋಟಿ ಬಾಚಿಕೊಂಡಿದೆ. ಹೊಸ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ ₹819.50 ಕೋಟಿಗೆ ತಲುಪಿದೆ.
ಕೇವಲ 10 ದಿನಗಳ ಅವಧಿಯಲ್ಲಿ 'ರಾಮಾಯಣ' ಸಿನಿಮಾ, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಈ ಹಿಂದೆ ಭರ್ಜರಿ ಯಶಸ್ಸು ಕಂಡಿದ್ದ ಮೂರು ಬೃಹತ್ ಸಿನಿಮಾಗಳ ಜೀವಿತಾವಧಿಯ (Lifetime) ದೇಶೀಯ ನಿವ್ವಳ ಗಳಿಕೆಯನ್ನು ಹಿಂದಿಕ್ಕಿರುವುದು ವಿಶೇಷ. 2023ರಲ್ಲಿ ಬಿಡುಗಡೆಯಾಗಿದ್ದ ಶಾರುಖ್ ಖಾನ್ ಅಭಿನಯದ 'ಜವಾನ್' (₹640.25 ಕೋಟಿ), 2024ರ 'ಕಲ್ಕಿ 2898 ಎಡಿ' (₹646.31 ಕೋಟಿ) ಹಾಗೂ 2025ರಲ್ಲಿ ತೆರೆಕಂಡಿದ್ದ 'ಕಾಂತಾರ: ಎ ಲೆಜೆಂಡ್ ಚಾಪ್ಟರ್ 1' (₹622.48 ಕೋಟಿ) ಚಿತ್ರಗಳ ದಾಖಲೆಗಳನ್ನು 'ರಾಮಾಯಣ' ಅಳಿಸಿಹಾಕಿದೆ.


