ವಡೋದರಾ: ದೇಶದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದೆಹಲಿಯಿಂದ ಹೊರಗೆ ಗುಜರಾತ್‌ನಲ್ಲಿ ಆಯೋಜನೆ ಮಾಡಲಾಗಿದ್ದು, ಮಂಗಳವಾರ ವಡೋದರಾದಲ್ಲಿ ಕಾರ್ಯಕ್ರಮ ನಡೆಯಲಿದೆ.
72ನೇ ಆವೃತ್ತಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಜು.18ರಂದು ಘೋಷಣೆ ಮಾಡಲಾಗಿದೆ.ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ವಡೋದರಾದ ಏಕತಾನಗರದಲ್ಲಿನ ಪ್ರಖ್ಯಾತ ಏಕತಾ ಪ್ರತಿಮೆಯಿರುವ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
1954ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, 2024ನೇ ಸಾಲಿನಲ್ಲಿ ತೆರೆಕಂಡ ಭಾರತೀಯ ಚಲನಚಿತ್ರಗಳಿಗೆ ಇದೀಗ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕನ್ನಡ ಚಿತ್ರಕ್ಕೂ ಪ್ರಶಸ್ತಿ
ಚಲನಚಿತ್ರ ಕ್ಷೇತ್ರದಲ್ಲಿ ದೇಶದ ಅತ್ಯುನ್ನತ ಗೌರವವಾದ ದಾದಾ ಸಾಹೇಬ್ ಫಾಲ್ಕೆಯ 2024ನೇ ಸಾಲಿನ ಪ್ರಶಸ್ತಿ ಕನ್ನಡದ ಮೇರು ನಟ ಅನಂತ್ ನಾಗ್ ಅವರಿಗೆ ದೊರೆತಿದ್ದು, ಅವರಿಗೆ ಈ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ರಾಷ್ಟ್ರಪತಿ ಮುರ್ಮು ಪ್ರದಾನ ಮಾಡಲಿದ್ದಾರೆ.
ಇನ್ನು ಕನ್ನಡದ ಅತ್ಯುತ್ತಮ ಚಿತ್ರ ವಿಭಾಗದಲ್ಲಿ 'ಮಿಥ್ಯ', ಅತ್ಯುತ್ತಮ ಪೋಷಕ ನಟಿಯಾಗಿ ಮಿಥ್ಯದ ರೂಪಶ್ರೀ ವರ್ಕಾಡಿ, ಅತ್ಯುತ್ತಮ ಬಾಲನಟ ಅತೀಶ್ ಶೆಟ್ಟಿ, ಅತ್ಯುತ್ತಮ ಸಿನಿಮಾ ಆಧಾರಿತ ಪುಸ್ತಕ 'ನಾನಿರುವುದೇ ನಿಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ'ಗಳು ಪ್ರಶಸ್ತಿ ಪಡೆದಿವೆ.


