ಬೆಂಗಳೂರು : ಅನಗತ್ಯ ಆರೋಪದ ಕಾರಣದಿಂದ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಹಾಕಿದ ಕಣ್ಣೀರು ರಾಜ್ಯದಲ್ಲಿ ಬಿಜೆಪಿಯನ್ನು ನಾಶ ಮಾಡಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನ ಗೃಹ ಕಚೇರಿಯಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, "ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದು, ದಲಿತ ಹಾಗೂ ಪರಿಶಿಷ್ಟ ಜಾತಿಯ ನಾಯಕ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿ.ನಾಗೇಂದ್ರ ಅವರ ವಿರುದ್ಧ ರಾಜಕೀಯ ದುರುದ್ದೇಶದಿಂದ ಆರೋಪಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಬಿಜೆಪಿ ತಕ್ಕೆ ಬೆಲೆಯನ್ನು ತೆರಬೇಕಾಗುತ್ತದೆ" ಎಂದು ಎಚ್ಚರಿಸಿದರು.
"ರಾಜಕಾರಣದಲ್ಲಿ ನಾಗೇಂದ್ರ ಅವರು ನನಗಿಂತ ಹಿರಿಯರು. ದಲಿತ ಮತ್ತು ಪರಿಶಿಷ್ಟ ಜಾತಿಯ ನಾಯಕರು ರಾಜಕೀಯವಾಗಿ ಬೆಳೆಯುತ್ತಿರುವುದು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸತ್ಯಕ್ಕೆ ದೂರವಾದ ಆರೋಪಗಳನ್ನು ಅವರ ಮೇಲೆ ಮಾಡಲಾಗುತ್ತಿದೆ" ಎಂದು ಆರೋಪಿಸಿದರು.
"ನಾಗೇಂದ್ರ ಅವರು ನಿರಪರಾಧಿ. ತನಿಖಾ ವರದಿಗಳನ್ನು ಪರಿಶೀಲಿಸಿ, ಚರ್ಚಿಸಿದ ಬಳಿಕ ಅವರ ಮೇಲಿನ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂಬುದು ನಮಗೆ ತಿಳಿದಿದೆ.
ನಾಲ್ಕು ಬಾರಿ ಗೆದ್ದಿರುವ ಒಬ್ಬ ದಲಿತ ನಾಯಕನ ವಿರುದ್ಧ ಬಿಜೆಪಿ ನಡೆದುಕೊಂಡ ರೀತಿ ನಾಗೇಂದ್ರ ಅವರಿಗೆ ಮಾತ್ರವಲ್ಲ, ತಳ ಸಮುದಾಯಗಳಿಗೂ ನೋವುಂಟು ಮಾಡಿದೆ" ಎಂದರು.
ಆರ್.ಅಶೋಕ್ ಸಿಬಿಐ ಅಧಿಕಾರಿಯೇ?
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ನಾಗೇಂದ್ರ ವಿಚಾರದಲ್ಲಿ ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರು, "ಆರ್.ಅಶೋಕ್ ಅವರು ನಾಗೇಂದ್ರ ವಿಚಾರದಲ್ಲಿ ವಾದ ಮಾಡಲು ಸಿಬಿಐ ಅಧಿಕಾರಿಯೇ? ತನಿಖಾ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತವೆ. ಮುಂದೊಂದು ದಿನ ಅಶೋಕ್ ಅವರ ಬುಡಕ್ಕೂ ಯಾವುದಾದರೂ ವಿಷಯ ಬಂದಾಗ ಬಿಜೆಪಿಯ ಬಣ್ಣ ಏನೆಂಬುದು ಅವರಿಗೆ ತಿಳಿಯುತ್ತದೆ" ಎಂದು ತಿರುಗೇಟು ನೀಡಿದರು.


