ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಕೊನೆಯ ಗಳಿಗೆಯಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರನ್ನು ಮತ್ತೊಂದು ಅವಧಿಗೆ ರಾಜ್ಯಸಭೆ ಸದಸ್ಯರನ್ನಾಗಿ ಮುಂದುವರಿಸುವ ಪ್ರಸ್ತಾಪಕ್ಕೆ ಬ್ರೇಕ್ ಬಿದ್ದಿದೆ.ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೂ ಅವಕಾಶ ತಪ್ಪಿದೆ.
ರಾಜ್ಯ ಬಿಜೆಪಿ ಮಾಜಿ ಉಪಾಧ್ಯಕ್ಷ ಪ್ರೊ.ಎಂ. ನಾಗರಾಜ್ ಅವರನ್ನು ರಾಜ್ಯಸಭೆ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ಪಕ್ಷದ ಶಿಸ್ತು ಸಮಿತಿಯ ಮಾಜಿ ಉಪಾಧ್ಯಕ್ಷ ಲಿಂಗರಾಜ್ ಪಾಟೀಲ್, ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಅವರನ್ನು ಅಭ್ಯರ್ಥಿಗಳಾಗಿ ಭಾನುವಾರ ತಡರಾತ್ರಿ ಘೋಷಿಸಲಾಗಿದೆ.
ಪಕ್ಷದ ರಾಜ್ಯ ಘಟಕದಿಂದ ರಾಜ್ಯಸಭಾ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಉಪಾಧ್ಯಕ್ಷ ನಿರ್ಮಲ್ ಕುಮಾರ್, ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿದ್ದು, ವಿಧಾನ ಪರಿಷತ್ ಚುನಾವಣೆಗೆ ರಘು ಕೌಟಿಲ್ಯ, ಪ್ರಮೋದ್ ಮಧ್ವರಾಜ್, ನಳಿನ್ ಕುಮಾರ್ ಕಟೀಲು, ಲಿಂಗರಾಜ ಪಾಟೀಲ್, ಮಂಜುಳಾ, ಶರಣು ತಳ್ಳಿಕೇರಿ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು.
ರಾಜ್ಯಸಭೆಗೆ ಎಂ. ನಾಗರಾಜ್, ವಿಧಾನ ಪರಿಷತ್ ಗೆ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಅಭ್ಯರ್ಥಿಗಳಾಗಿ ಬಿಜೆಪಿ ಘೋಷಿಸಿದೆ.

