ನವದೆಹಲಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವ ಅಥವಾ ದೇಶಾದ್ಯಂತ ಗೋ ಹತ್ಯೆ ನಿಷೇಧಿಸುವ ಸಂಪೂರ್ಣವಾಗಿ ನಿಷೇಧಿಸುವ ಯಾವುದೇ ಪ್ರಸ್ತಾವನೆ ಸದ್ಯ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.
ಗೋವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಬೇಕು ಮತ್ತು ಗೋ ಹತ್ಯೆಯನ್ನು ನಿಷೇಧಿಸಬೇಕು ಎನ್ನುವ ಒತ್ತಾಯ ವಿವಿಧ ಸಂಘಟನೆಗಳಿಂದ ಕೇಳಿ ಬರುತ್ತಿದೆ. ಆದರೆ ಸದ್ಯಕ್ಕೆ ಈ ಬಗ್ಗೆ ಕೇಂದ್ರ ಸಚಿವ ಸಂಪುಟದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲವೆಂದು ಹೇಳಿದ್ದಾರೆ.
ಗೋ ಹತ್ಯೆಗೆ ಸಂಬಂಧಿಸಿದ ಕಾನೂನುಗಳು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರವಾಗಿದೆ. ಆಯಾ ರಾಜ್ಯಗಳ ಸ್ಥಳೀಯ ಪರಿಸ್ಥಿತಿಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸರ್ಕಾರಗಳು ತೀರ್ಮಾನ ಕೈಗೊಳ್ಳುತ್ತವೆ.
ಗೋ ಹತ್ಯೆ ಸಂಪೂರ್ಣ ನಿಷೇಧಕ್ಕೆ ಹಿಂದೂಪರ ಸಂಘಟನೆಗಳು ಮಾತ್ರವಲ್ಲದೆ, ಅನೇಕ ಮುಸ್ಲಿಂ ಸಂಘಟನೆಗಳು ಮತ್ತು ಧರ್ಮ ಗುರುಗಳು ಕೂಡ ಇತ್ತೀಚೆಗೆ ಒಲವು ತೋರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

