ನವದೆಹಲಿ: ರೈಲು ನಿಲ್ದಾಣಗಳಲ್ಲಿ ಕೌಂಟರ್‌ಗಳ ಮುಂದೆ ಸಾಲಿನಲ್ಲಿ ನಿಲ್ಲದೆ ಡಿಜಿಟಲ್ ಅನ್‌ರಿಸರ್ವ್ಡ್ ಟಿಕೆಟ್ ಬುಕ್ ಮಾಡಿಕೊಳ್ಳುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ.
ಇನ್ನು ಮುಂದೆ ಪ್ರಯಾಣದ ವೇಳೆ ರೈಲ್‌ವನ್ (RailOne) ಆಯಪ್ ಮೂಲಕ ಬುಕ್ ಮಾಡಿದ ಮೂಲ (Original) ಡಿಜಿಟಲ್ ಟಿಕೆಟ್ ಮಾತ್ರ ಮಾನ್ಯವಾಗುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಮಹಿಳಾ ಪ್ರಯಾಣಿಕೆಯೊಬ್ಬರು ವಾಟ್ಸ್‌ಆಪ್‌ನಲ್ಲಿ ಬಂದ ಟಿಕೆಟ್‌ನ ಸ್ಕ್ರೀನ್‌ಶಾಟ್ ತೋರಿಸಿದ್ದರು.
ಆದರೆ ಪರಿಶೀಲಿಸಿದಾಗ ರೈಲು ಹೊರಟ ನಂತರವೇ ಟಿಕೆಟ್ ಬುಕ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಪರಿಶೀಲಕ (ಟಿಟಿಇ) ದಂಡ ವಿಧಿಸಿದ್ದರು.
ಈ ಘಟನೆಯ ನಂತರ ರೈಲ್ವೆ ಇಲಾಖೆ ರೈಲ್‌ವನ್ ಆಯಪ್ ಮೂಲಕ ಬುಕ್ ಮಾಡುವ ಅನ್‌ರಿಸರ್ವ್ಡ್ ಟಿಕೆಟ್‌ಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೊಸ ನಿಯಮಗಳು: ಇವುಗಳಿಗೆ ಮಾನ್ಯತೆ ಇಲ್ಲ!
ರೈಲ್ವೆ ಮಂಡಳಿ ಪರಿಷ್ಕರಿಸಿದ ನಿಯಮಗಳ ಪ್ರಕಾರ,
ಟಿಕೆಟ್‌ನ ಸ್ಕ್ರೀನ್‌ಶಾಟ್,
ಮೊಬೈಲ್‌ನಲ್ಲಿ ಉಳಿಸಿಕೊಂಡಿರುವ ಟಿಕೆಟ್ ಫೋಟೋ,
ಪಿಡಿಎಫ್ (PDF) ಪ್ರತಿಗಳು,
ವಾಟ್ಸ್‌ಆಪ್ ಅಥವಾ ಇತರ ಮೆಸೇಜಿಂಗ್ ಆಯಪ್‌ಗಳ ಮೂಲಕ ಬಂದ ಟಿಕೆಟ್‌ಗಳು ಇನ್ನು ಮುಂದೆ ಮಾನ್ಯವಾಗುವುದಿಲ್ಲ.
ಇಂತಹ ದಾಖಲೆಗಳನ್ನು ತೋರಿಸಿ ಪ್ರಯಾಣಿಸಿದರೆ, ಅವರನ್ನು ಟಿಕೆಟ್ ಇಲ್ಲದ ಪ್ರಯಾಣಿಕರು ಎಂದು ಪರಿಗಣಿಸಿ ಭಾರಿ ದಂಡ ವಿಧಿಸಲಾಗುತ್ತದೆ.
ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ ಅದೇ ಮೊಬೈಲ್ ಸಂಖ್ಯೆ ಮತ್ತು ಅದೇ ಮೊಬೈಲ್‌ನಲ್ಲಿ ರೈಲ್‌ವನ್ ಆಯಪ್ ತೆರೆಯುವ ಮೂಲಕ ಮೂಲ ಡಿಜಿಟಲ್ ಟಿಕೆಟ್‌ನ್ನು ಟಿಕೆಟ್ ಪರಿಶೀಲಕರಿಗೆ ತೋರಿಸಬೇಕು.


