ನವದೆಹಲಿ: ಖ್ಯಾತ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ 3 ತಿಂಗಳ ಸಾಧಾರಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.ಈ ಹಿಂದೆ ಇವರಿಗೆ ವಿಧಿಸಲಾಗಿದ್ದ 6 ತಿಂಗಳ ಜೈಲು ಶಿಕ್ಷೆಯನ್ನು ಕೋರ್ಟ್ 3 ತಿಂಗಳಿಗೆ ಕಡಿತಗೊಳಿಸಿದೆ.
ನಟ ರಾಜ್‌ಪಾಲ್ ಯಾದವ್ ಮತ್ತು ಅವರ ಪತ್ನಿ ರಾಧಾ ಯಾದವ್ ಅವರು 'ಮೆಸರ್ಸ್ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್' ಕಂಪನಿಯಿಂದ ಚಿತ್ರ ನಿರ್ಮಾಣಕ್ಕಾಗಿ ಪಡೆದಿದ್ದ ಸಾಲದ ಮರುಪಾವತಿ ವಿಷಯದಲ್ಲಿ ಈ ಕಾನೂನು ಸಂಕಷ್ಟ ಎದುರಿಸುತ್ತಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸರಣಿ ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ಏಕಸದಸ್ಯ ಪೀಠವು ಈ ಆದೇಶ ಹೊರಡಿಸಿದೆ.
ಪದೇ ಪದೇ ಭರವಸೆ ಉಲ್ಲಂಘಿಸಿದ ನಟ:
ಸಾಲದ ಹಣವನ್ನು ಮರುಪಾವತಿಸುವಂತೆ ಕೋರ್ಟ್ ರಾಜ್‌ಪಾಲ್ ಯಾದವ್ ಅವರಿಗೆ ಹಲವು ಬಾರಿ ಅವಕಾಶಗಳನ್ನು ನೀಡಿತ್ತು.ಹಣ ಸಂದಾಯ ಮಾಡುವುದಾಗಿ ಕೋರ್ಟ್‌ಗೆ ನಟ ಸ್ವತಃ ಮುಚ್ಚಳಿಕೆ (Undertaking) ನೀಡಿದ್ದರೂ, ಅದನ್ನು ಪೂರೈಸುವಲ್ಲಿ ವಿಫಲರಾಗಿದ್ದರು.
ಸೆಟಲ್ಮೆಂಟ್ ಮಾಡಿಕೊಳ್ಳಲು ನ್ಯಾಯಾಲಯ ಸಾಕಷ್ಟು ಉದಾರತೆ ಮತ್ತು ಕಾಲಾವಕಾಶ ನೀಡಿದಾಗ್ಯೂ ನಟ ಅದನ್ನು ದುರುಪಯೋಗಪಡಿಸಿಕೊಂಡಿದ್ದರಿಂದ, ಅವರ ವರ್ತನೆಯನ್ನು ನ್ಯಾಯಾಧೀಶರು ತೀವ್ರವಾಗಿ ಖಂಡಿಸಿದ್ದಾರೆ.


