ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಂಪುಟ ವಿಸ್ತರಣೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಗೆ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಹೈಕಮಾಂಡ್ ನಾಯಕರು ಇಂದು ಅಥವಾ ನಾಳೆ ಬರುವವರಿದ್ದಾರೆ. ಅವರು ಬಂದ ಬಳಿಕ ನಮ್ಮನ್ನು ಯಾವಾಗ ಭೇಟಿಗೆ ಕರೆಯುತ್ತಾರೋ, ಆಗ ತಾವು ದೆಹಲಿಗೆ ತೆರಳಿ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸುವ ಮೂಲಕ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ತಳ್ಳಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ತಲೆದೋರಿರುವ ಮಳೆ ಅಭಾವ ಹಾಗೂ ಶಾಸಕರ ಬೇಡಿಕೆಗಳ ಹಿನ್ನೆಲೆಯಲ್ಲಿ 'ಮೋಡ ಬಿತ್ತನೆ' ನಡೆಸುವ ಕುರಿತು ಮುಖ್ಯಮಂತ್ರಿಗಳು ಸುಳಿವು ನೀಡಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಮೋಡ ಬಿತ್ತನೆ ಮಾಡುವಂತೆ ಶಾಸಕರೆಲ್ಲರೂ ತೀವ್ರ ಒತ್ತಾಯ ಮಾಡಿದ್ದಾರೆ.
ಈ ತಾಂತ್ರಿಕ ಪ್ರಕ್ರಿಯೆಯ ಸಾಧಕ-ಬಾಧಕಗಳ ಬಗ್ಗೆ ನಮ್ಮ ಕಾನೂನು ಅಧಿಕಾರಿಗಳು ಹಾಗೂ ಹಣಕಾಸು ಇಲಾಖೆಯೊಂದಿಗೆ ಸೂಕ್ತ ಚರ್ಚೆ ನಡೆಸಬೇಕಾಗಿದೆ.
ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.


