ಮುಂಬೈ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಘಟಕ ಜಲಾವೃತಗೊಂಡ ಪರಿಣಾಮ ಸುಮಾರು 3,000 ಎಲ್‌ಪಿಜಿ ಸಿಲಿಂಡರ್‌ಗಳು (ತುಂಬಿದ ಹಾಗೂ ಖಾಲಿ) ಪಾತಾಳಗಂಗಾ ನದಿಗೆ ಕೊಚ್ಚಿಹೋಗಿವೆ.
ಈ ಸಿಲಿಂಡರ್‌ಗಳನ್ನು ಜನರು ಎತ್ತಿಕೊಳ್ಳಲು ಮುಗಿಬೀಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾಡಳಿತ ತುರ್ತು ಎಚ್ಚರಿಕೆ ನೀಡಿದೆ.
ಪನ್ವೇಲ್ ತಾಲ್ಲೂಕಿನ ಎಂಐಡಿಸಿ ಚವಾಣೆ ಪ್ರದೇಶದಲ್ಲಿರುವ ಎಚ್‌ಪಿಸಿಎಲ್ ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಘಟಕಕ್ಕೆ ಭಾರೀ ಮಳೆಯಿಂದ ಪ್ರವಾಹದ ನೀರು ನುಗ್ಗಿದ ಪರಿಣಾಮ, ಘಟಕದಲ್ಲಿದ್ದ ಸಾವಿರಾರು ಸಿಲಿಂಡರ್‌ಗಳು ನೀರಿನ ರಭಸಕ್ಕೆ ನದಿಗೆ ಕೊಚ್ಚಿಹೋಗಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಯಗಡ ಜಿಲ್ಲಾಧಿಕಾರಿ ಕಿಶನ್ ಜಾವಳೆ, ನದಿ ದಡದಲ್ಲಿ ಅಥವಾ ಕೆಳಭಾಗದಲ್ಲಿ ಸಿಲಿಂಡರ್‌ಗಳು ಕಂಡುಬಂದರೆ ಯಾವುದೇ ಕಾರಣಕ್ಕೂ ಅವುಗಳನ್ನು ಮುಟ್ಟಬಾರದು ಅಥವಾ ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


