ಬೆಂಗಳೂರು: ಮಾಜಿ ಸಂಸದೆ, ನಟಿ ರಮ್ಯಾಗೆ ಅಶ್ಲೀಲ ಸಂದೇಶ ಹಾಗೂ ಕಾಮೆಂಟ್‌ಗಳನ್ನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕುಟುಂಬಸ್ಥರು ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ ಎಂದು ನಟಿ ರಮ್ಯಾ ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ವಿಚಾರಣೆ ವೇಳೆ ಬೆಂಗಳೂರಿನ 46ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಆರೋಪಿಗಳ ಕುಟುಂಬಸ್ಥರು ರಮ್ಯಾ ಅವರಲ್ಲಿ ಕ್ಷಮೆ ಕೇಳಿದ್ದಾರೆ. ನಮ್ಮಿಂದ ತಪ್ಪಾಗಿದೆ ಇದೊಂದು ಸಲ ಕ್ಷಮಿಸಿ. ದಯವಿಟ್ಟು ಪ್ರಕರಣ ವಾಪಸ್ ಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ʻʻಇದೊಂದು ಪಾಠ ಆಗಬೇಕು. ನಾನು ಯಾವುದೇ ಕಾರಣಕ್ಕೂ ಕೇಸ್ ವಾಪಸ್ ತೆಗೆದುಕೊಳ್ಳಲ್ಲʼʼ ಎಂದು ಖಡಕ್ಕಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಸೋಷಿಯಲ್ ಮೀಡಿಯಾ ಹಾಗೂ ಮೊಬೈಲ್ ಬಳಸಿಕೊಂಡು ಯಾರ ಬಗ್ಗೆಯಾದರೂ ಮನಬಂದಂತೆ ಕೆಟ್ಟದಾಗಿ ಕಾಮೆಂಟ್ ಮಾಡುವುದು ಸರಿಯಲ್ಲ. ʻಒಬ್ಬ ಹೆಣ್ಣುಮಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಮೊದಲು ಸಾವಿರ ಬಾರಿ ಯೋಚಿಸುವಂತಾಗಬೇಕು. ಈ ಪ್ರಕರಣ ಎಲ್ಲರಿಗೂ ಒಂದು ಪಾಠವಾಗಬೇಕು ಎಂದು ನಟಿ ಹೇಳಿದ್ದಾರೆ.


