ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ (Independence day) ಅಂಗವಾಗಿ ಹೆಚ್‌ಎಂಟಿ (HMT) ಬಿಡುಗಡೆ ಮಾಡಿದ ವಿಶೇಷ ಸರಣಿಯ ಕೈಗಡಿಯಾರಗಳನ್ನು (Watches) ಖರೀದಿಸಲು ಸಾರ್ವಜನಿಕರು ಜಾಲಹಳ್ಳಿಯ ಕಾರ್ಖಾನೆ ಮಳಿಗೆ ಬಳಿ ಸುಮಾರು ಎರಡೂವರೆ ಕಿಲೋಮೀಟರ್‌ವರೆಗೆ ಸರತಿ ನಿಂತರು.
ಬಿಸಿಲನ್ನೂ ಲೆಕ್ಕಿಸದೆ ವಿವಿಧ ವಯೋಮಾನದ ಗ್ರಾಹಕರು ವಾಚ್‌ಗಳಿಗಾಗಿ ಕಾಯುತ್ತಿರುವುದು ಹೆಚ್‌ಎಂಟಿ ಮೇಲಿನ ಜನರ ಅಭಿಮಾನಕ್ಕೆ ಸಾಕ್ಷಿಯಾಯಿತು.
ಈ ವಿಶೇಷ ಸರಣಿಯ ವಾಚ್ ನಲ್ಲಿ ತ್ರಿವರ್ಣ ಧ್ವಜ ಮತ್ತು ಗಂಡಭೇರುಂಡ ವಿನ್ಯಾಸದ ವಿಶೇಷ ಡಿಸೈನ್ ಗಳು ಒಂದೇ ದಿನದಲ್ಲಿ ಸಂಪೂರ್ಣ ಮಾರಾಟವಾಗಿವೆ. ಜಾಲಹಳ್ಳಿ ಹಾಗೂ ಮೇಕ್ರಿ ಸರ್ಕಲ್ ಬಳಿಯ ಹೆಚ್‌ಎಂಟಿ ಭವನದ ಮಳಿಗೆಯಲ್ಲಿದ್ದ ಗಡಿಯಾರಗಳೂ ಖಾಲಿಯಾಗಿವೆ.
ಹೀಗೆ ಜನರ ಉತ್ಸಾಹ ಕಂಡು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದು, ಹೆಚ್‌ಎಂಟಿಗೆ ಮರುಜೀವ ನೀಡುವ ಪ್ರಯತ್ನಕ್ಕೆ ಇದು ಉತ್ತೇಜನ ನೀಡಿದೆ ಎಂದಿದ್ದಾರೆ.
ಸಂಸ್ಥೆಯ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ರಮೇಶ್ ಪ್ರಕಾರ, ಮುಂದಿನ ತಿಂಗಳ ಅಂತ್ಯದೊಳಗೆ ಹೊಸ ಸರಣಿಯ ವಾಚ್‌ಗಳನ್ನು ತರಲಾಗುವುದು. ಅತ್ಯುತ್ತಮ ಆಟೋಮ್ಯಾಟಿಕ್ ಮಾದರಿಗಳನ್ನೂ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಇದೆ.


