ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ 'Triumph of the Indian Republic: My Life, My Struggles' ಎಂಬ ಆತ್ಮಕಥನವನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು.
ಈ ಆತ್ಮಚರಿತ್ರೆಯಲ್ಲಿ ರಾಮನಾಥ್ ಕೋವಿಂದ್ ಅವರ ಅಸಾಧಾರಣ ಜೀವನ ಪಯಣದ ಅತ್ಯಂತ ವೈಯಕ್ತಿಕ ಅನುಭವಗಳನ್ನು ವಿವರಿಸಲಾಗಿದೆ.
ಅವರ ಬಾಲ್ಯದ ದಿನಗಳಿಂದ ಆರಂಭಿಸಿ, ಜೀವನದಲ್ಲಿ ಎದುರಿಸಿದ ಸವಾಲುಗಳು, ಹೋರಾಟಗಳು ಮತ್ತು ಸಾಧನೆಗಳು, ನಂತರದ ಅವರ ಗಣ್ಯ ಸಾರ್ವಜನಿಕ ಜೀವನ ಹಾಗೂ ಅಂತಿಮವಾಗಿ ಭಾರತದ 14ನೇ ರಾಷ್ಟ್ರಪತಿಯಾಗಿ ಸಲ್ಲಿಸಿದ ಸೇವೆಯವರೆಗಿನ ಪಯಣವನ್ನು ಈ ಕೃತಿ ದಾಖಲಿಸುತ್ತದೆ.
ಅವರ ಜೀವನ ಪಯಣ ಮತ್ತು ಸಾರ್ವಜನಿಕ ಸೇವೆಯನ್ನು ರೂಪಿಸಿದ ಮೌಲ್ಯಗಳು, ಅನುಭವಗಳು ಹಾಗೂ ಸಂದರ್ಭಗಳ ಕುರಿತು ಈ ಪುಸ್ತಕ ಮಹತ್ವದ ಒಳನೋಟಗಳನ್ನು ನೀಡುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಇಂದು ರಾಮನಾಥ್ ಕೋವಿಂದ್ ಜಿ ಅವರ ಆತ್ಮಕಥನದ ಬಿಡುಗಡೆಗೆ ಸಾಕ್ಷಿಯಾಗುವ ಅವಕಾಶ ನಮಗೆ ದೊರೆತಿದೆ.
ನಾನು ಕೋವಿಂದ್ ಜಿ ಅವರನ್ನು ಬಹಳ ವರ್ಷಗಳಿಂದ ಬಲ್ಲೆ. ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ ಅವರನ್ನು ಇನ್ನಷ್ಟು ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶವೂ ನನಗೆ ಸಿಕ್ಕಿದೆ.
ಅವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ನೀಡಿದ ಮಾರ್ಗದರ್ಶನ ಹಾಗೂ ನನ್ನ ಮೇಲಿದ್ದ ಅವರ ವಿಶೇಷ ಪ್ರೀತಿ ಮತ್ತು ಆತ್ಮೀಯತೆ ನನಗೆ ಅತ್ಯಂತ ಅಮೂಲ್ಯವಾದ ಸಂಪತ್ತಾಗಿದೆ" ಎಂದರು.
ಮುಂದುವರಿದು ಪ್ರಧಾನಿ ಮೋದಿ, "ಅವರ ಜೀವನದ ಬಗ್ಗೆ ನನಗಿರುವ ತಿಳುವಳಿಕೆ ಮತ್ತು ಅವರ ಸಾಮರ್ಥ್ಯದ ಬಗ್ಗೆ ನನಗಿರುವ ಅರಿವಿನ ಆಧಾರದ ಮೇಲೆ ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ-ರಾಮನಾಥ್ ಕೋವಿಂದ್ ಜಿ ಅವರ ಆತ್ಮಕಥನವು ಭಾರತದ ಪ್ರಜಾಪ್ರಭುತ್ವ ಮತ್ತು ಸಮಾಜಕ್ಕೆ ಅಮೂಲ್ಯವಾದ ಪರಂಪರೆಯಾಗಿ ಉಳಿಯಲಿದೆ.
ಅವರ ಜೀವನ ಪಯಣ ಹಾಗೂ ಸಮಾಜ ಮತ್ತು ದೇಶಕ್ಕೆ ಅವರು ನೀಡಿರುವ ಕೊಡುಗೆಗಳ ಬಗ್ಗೆ ನಾನು ಸಾಕಷ್ಟು ಮಾತನಾಡಬಹುದು. ಆದರೆ ಪುಸ್ತಕ ಬಿಡುಗಡೆ ಸಮಾರಂಭವು ಕೇವಲ ಒಂದು 'ಪರಿಚಯ'ದಂತಿರಬೇಕು. ನೀವು ಸ್ವತಃ ಪುಸ್ತಕವನ್ನು ಓದಿ ಅದರ ಸಂಪೂರ್ಣ ಪ್ರಯೋಜನ ಪಡೆಯುವುದು ಉತ್ತಮ" ಎಂದು ಹೇಳಿದರು.


