ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿದ್ದ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿರುವುದು ದೊಡ್ಡ ಸಂಚಲನ ಮೂಡಿಸಿದೆ.
ಸಿಸಿಬಿ ಅಧಿಕಾರಿಗಳು ನಡೆಸಿದ ದಿಢೀರ್ ದಾಳಿ ವೇಳೆ ಈ ಮೊಬೈಲ್ ಜಪ್ತಿಯಾಗಿದ್ದು, ಕಾರಾಗೃಹದ ಸುರಕ್ಷತಾ ನಿಯಮಗಳ ತೀವ್ರ ಉಲ್ಲಂಘನೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.
ಪ್ರಜ್ವಲ್ ಅವರೇ ಈ ಮೊಬೈಲ್ ಬಳಸುತ್ತಿದ್ದರು ಎಂಬ ಬಲವಾದ ಅನುಮಾನ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ರೈ (A1) ಹಾಗೂ ಪ್ರಜ್ವಲ್ ರೇವಣ್ಣ (A2) ವಿರುದ್ಧ ಹೊಸ ಎಫ್‌ಐಆರ್ ದಾಖಲಾಗಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಅವರ ಮಾರ್ಗದರ್ಶನದಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಒಳಗೊಂಡ ತಂಡವು ಜೈಲಿನ ಮೇಲೆ ಈ ಸರ್ಪ್ರೈಸ್ ರೈಡ್ ನಡೆಸಿತ್ತು.
ತಪಾಸಣೆ ವೇಳೆಯಲ್ಲಿ ಪ್ರಜ್ವಲ್ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಕಾರಾಗೃಹದೊಳಗೆ ಇಷ್ಟೊಂದು ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಮಾಜಿ ಸಂಸದನಿಗೆ ಈ ಆಂಡ್ರಾಯ್ಡ್ ಫೋನ್ ತಲುಪಿಸಿದ್ದು ಯಾರು ಎಂಬ ಬಗ್ಗೆ ಸಿಸಿಬಿ ತೀವ್ರ ತನಿಖೆ ಆರಂಭಿಸಿದೆ. ಈ ಜಾಲದ ಹಿಂದಿರುವವರನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮತ್ತೊಂದು ಎಫ್‌ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.


