ಬೆಳಗಾವಿ: ಖಾನಾಪುರ ತಾಲ್ಲೂಕಿನ ನಿಡಗಲ್ ಗ್ರಾಮದ ಆರಾಧ್ಯ ದೈವವೆಂದು ಪರಿಗಣಿಸಲಾಗಿರುವ ಸಿದ್ದೇಶ್ವರ ದೇವಸ್ಥಾನದಲ್ಲಿ (Siddeshwara temple) ದುಷ್ಕರ್ಮಿಗಳು ಪವಿತ್ರ ಧಾರ್ಮಿಕ ವಿಗ್ರಹಗಳನ್ನು (Idols) ಹಾನಿಗೊಳಿಸಿರುವ ಘಟನೆ ನಡೆದಿದೆ.
ಗ್ರಾಮಸ್ಥರ ಪ್ರಕಾರ, ದೇವಸ್ಥಾನದ ಆವರಣದಲ್ಲಿದ್ದ ಶಿವಲಿಂಗ (Shiva linga), ನಂದಿ ಮೂರ್ತಿ, ಆಮೆ ಆಕಾರದ ರಚನೆ ಹಾಗೂ ದೇವಸ್ಥಾನದ ಮುಂಭಾಗದಲ್ಲಿರುವ ಬೃಂದಾವನಕ್ಕೆ ಹಾನಿ ಮಾಡಲಾಗಿದೆ.
ನಿಡಗಲ್ ಗ್ರಾಮದ ಹೊರವಲಯದಲ್ಲಿರುವ ಬೆಟ್ಟದ ಮೇಲಿರುವ ಈ ಐತಿಹಾಸಿಕ ದೇವಾಲಯ ಧಾರ್ಮಿಕ ಮಹತ್ವದ ಜೊತೆಗೆ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ.
ದೇವಸ್ಥಾನದಲ್ಲಿ ಧ್ವಂಸ ಕೃತ್ಯ ನಡೆದಿರುವ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಿವಿಧ ಹಿಂದೂ ಸಂಘಟನೆಗಳೂ ಘಟನೆಯನ್ನು ಖಂಡಿಸಿವೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ತಂಡ ಖಾನಾಪುರ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದೆ. ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಕೂಡಲೇ ಬಂಧಿಸಬೇಕು ಹಾಗೂ ದೇವಸ್ಥಾನಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಮನವಿ ಮಾಡಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.


