ಧಾರವಾಡ: ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ಕರಡಿ ದಾಳಿಯಿಂದ ರೈತ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದಲ್ಲಿ ನಡೆದಿದೆ.
ಬೆಂಡಲಗಟ್ಟಿ ಗ್ರಾಮದ ಶಂಕ್ರಪ್ಪ ಪರಸಪ್ಪ ಲಮಾಣಿ(49) ಮೃತಪಟ್ಟವರು. ಕಬ್ಬಿನ ಗದ್ದೆಯಲ್ಲಿ ಕೆಲಸಕ್ಕೆ ತೆರಳಿದ್ದ ಅವರು ಕೆಲಸ ಮಾಡುವ ವೇಳೆ ಏಕಾಏಕಿ ಕರಡಿ ದಾಳಿ ಮಾಡಿದೆ.
ಕರಡಿ ದಾಳಿಯಿಂದ ಶಂಕ್ರಪ್ಪ ಕಿರುಚಾಡಿದಾಗ ಸುತ್ತಮುತ್ತಲಿನ ಹೊಲಗಳಲ್ಲಿದ್ದ ರೈತರು ರಕ್ಷಣೆಗೆ ಧಾವಿಸಿ ಬಂದಿದ್ದಾರೆ. ಈ ವೇಳೆ ಕರಡಿ ಪರಾರಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶಂಕ್ರಪ್ಪ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ.
ಮೃತನ ಕುಟುಂಬಕ್ಕೆ ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಡಿಎಫ್‌ಒ ಅಲೀಂ ಸಿದ್ದಿಖಿ ತಿಳಿಸಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


